ಪಡುಬಿದ್ರಿ, ಅ 07 (DaijiworldNews/DB): ಪಡುಬಿದ್ರಿಯಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್ನ ನಿರ್ವಹಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಬ್ಲೂಫ್ಲ್ಯಾಗ್ ಬೀಚ್ನ ಹಲವು ಸಿಬಂದಿ ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಿಬಂದಿ ದೂರು ಸಲ್ಲಿಸಿದರು. ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಸರಿಯಿಲ್ಲ. ನಕಲಿ ರಶೀದಿಗಳನ್ನು ಮುದ್ರಿಸಿ ಬೋಟಿಂಗ್ಗೆ ಹಣ ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ವಸೂಲಿ ಮಾಡಿದ ಹಣವು ಪ್ರವಾಸೋದ್ಯಮ ಇಲಾಖೆ ಖಾತೆಗೆ ಬದಲಾಗಿ ವ್ಯಕ್ತಿಯೋರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೆ ಈ ಹಿಂದೆ ದೂರು ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗದ ಕಾರಣ ಮತ್ತೊಮ್ಮೆ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ಪತ್ರಕ್ಕೆ 22 ಮಂದಿ ಗುತ್ತಿಗೆ ಉದ್ಯೋಗಿಗಳು ಸಹಿ ಮಾಡಿದ್ದಾರೆ.
ಬ್ಲೂಫ್ಲ್ಯಾಗ್ ಬೀಚ್ನ ಕರ್ತವ್ಯದಲ್ಲಿ ಒಟ್ಟು 31 ಉದ್ಯೋಗಿಗಳಾಗಿದ್ದೇವೆ. ಸೂಪರ್ವೈಸರ್ಗಳಿಬ್ಬರು ನಮಗೆ ಜೀವ ಭಯವುಂಟು ಮಾಡುತ್ತಿದ್ದು, ನಮಗೆ ನ್ಯಾಯ ಸಿಗಬೇಕೆಂದು ಅವರು ಆಗ್ರಹಿಸಿದ್ದಾರೆ. ಇನ್ನು ಸಿಬಂದಿಯ ಆರೋಪವನ್ನು ತಳ್ಳಿ ಹಾಕಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಕ್ಲಿಫರ್ಡ್ ಲೋಬೋ, ಬೀಚ್ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಮೂಡಿರುವುದೇ ಈ ಆರೋಪಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ಒದಗಿಸಲಾಗಿದ್ದು, ಮಾಸಿಕ ವೇತನ ಕೂಡಾ ಸಕಾಲದಲ್ಲೇ ಪಾವತಿಯಾಗುತ್ತಿದೆ. ಬೋಟಿಂಗ್, ಪ್ರವೇಶ ಶುಲ್ಕ ಮುಂತಾದ ಆದಾಯಗಳಿಗೆ ರಶೀದಿ ವ್ಯವಸ್ಥೆಯೂ ಇದ್ದು, ಪ್ರತಿ ದಿನದ ಆದಾಯ ಮರುದಿನ ಇಲಾಖೆಯ ಖಾತೆಗೆ ಬರುತ್ತದೆ. ಆದಾಗ್ಯೂ ಅಸಮಾಧಾನಗೊಂಡಿರುವ ಉದ್ಯೋಗಿಗಳು ದಾಖಲೆ ನೀಡಿದರೆ ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.