ಮಂಗಳೂರು,ಅ 07 (DaijiworldNews/MS): ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ವಂಚನೆಗೊಳಗಾದ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಾ.೩ರಂದು ಬೆಂಗಳೂರಿನ ಟೆಕ್ಕಿ ಮಂಗಳೂರಿಗೆ ಆಗಮಿಸಿದ್ದ ಟೆಕ್ಕಿ ಇಲ್ಲಿ ಸುತ್ತಾಡಿದ್ದರು . ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ಸರ್ಚ್ ಮಾಡಿದ್ದಾರೆ. ಈ ವೇಳೆ ವಿಮಾನ ಇಲ್ಲದಿರುವುದು ತಿಳಿದು, ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಸರ್ಚ್ ಮಾಡಿದ್ದಾರೆ. ಈ ವೇಳೆ, ಖಾಸಗಿ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ವೆಬ್ಸೈಟ್ ಒಂದು ಸಿಕ್ಕಿದೆ. ಆದನ್ನು ಸಂಪರ್ಕಿಸಿದಾಗ, ನಿತಿನ್ ಎನ್ನುವ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದ.
ಆ ಬಳಿಕ ಹೆಲಿಕಾಪ್ಟರ್ ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳುಹಿಸಿದ್ದ ಕ್ಯೂಆರ್ ಕೋಡ್ಗೆ ಹಣ ನೀಡಿದ್ದಾರೆ. ಅನಂತರ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ವೈಷ್ಣೋದೇವಿ ದೇವಸ್ಥಾನಕ್ಕೆ ಕರೆ ಮಾಡಿದಾದ ತಮ್ಮಲ್ಲಿ ಅಂತಹ ಯಾರೇ ಪ್ರತಿನಿಧಿ ಇಲ್ಲವೆಂದು ಹೇಳಿದ್ದು, ಈ ವೇಳೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಅದರಂತೆ ಮಂಗಳೂರಿಗೆ ಬಂದು ಸೈಬರ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.