ವಿಟ್ಲ, ಅ 06 (DaijiworldNews/SM): ಹಿತಮಿತ ಮಾತು ನಮ್ಮ ಬದುಕಿನ ಪಥವನ್ನು ಬದಲಿಸುವ ಬಲ್ಲದು. ನಿರಂತರ ದೇವರ ನಾಮಸ್ಮರಣೆ ಪರಿವರ್ತನೆಗೆ ಕಾರಣವಾಗಿದೆ. ಪ್ರೀತಿಗಿಂತ ದೊಡ್ಡ ಶಕ್ತಿ ಸಂಪತ್ತು ಬೇರೊಂದಿಲ್ಲ. ಸನ್ಯಾಸ ಜೀವನ ಸ್ವೀಕರಿಸಿದ ಬಳಿಕ ಕನಕ ಕಾಂಚಣ ರಹಿತವಾಗಿರಬೇಕು. ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಅಂಗವಾಗಿ ಮಧುಕರಿ ಸೇವೆಯ ಬಳಿಕ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಮಾತನಾಡಿ ಅಹಂಕಾರ ಬಿಟ್ಟವರಿಗೆ ಅಲಂಕಾರದ ಅವಶ್ಯಕತೆಯಿಲ್ಲ. ತ್ಯಾಗದಿಂದ ಸುಖ ನಿರಂತರವಾಗಿರುತ್ತದೆ. ಫಲಾಪೇಕ್ಷೆ ಇಲ್ಲದೇ ಜನರ ಸೇವೆಯನ್ನು ಮಾಡಬೇಕು. ಭಕ್ತಿ ತೋರಿಕೆಗೆ ಇರಬಾರದು ಎಂದು ತಿಳಿಸಿದರು.
ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಹಾಗೂ ಅನಿತಾ ಸುರೇಂದ್ರ ಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಕ್ಷೇತ್ರದ ವತಿಯಿಂದ ಮಾಣಿಲ ಶ್ರೀಗಳನ್ನು ಗೌರವಿಸಲಾಯಿತು.
ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಶಿರಡಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಲೆಕ್ಕಪತ್ರ ಮತ್ತು ಹಣಕಾಸು ಅಧಿಕಾರಿ ಲಂಕೆ ಸಾಹೇಬ್ ರಾವ್ ಪಾಂಡುರಂಗ್, ಪುಣೆ ಉದ್ಯಮಿ ರಂಜೀತ್ ಕಚಾರು ಗೊಡಮಗಾವೆ, ಜಗದೀಶ್ ಅಧಿಕಾರಿ, ಸುದರ್ಶನ ಜೈನ್, ಮಾಧವ ಮಾವೆ, ದಯಾನಂದ ಶೆಟ್ಟಿ, ಉಡುಪಿ ಕೊಡವೂರು ಶ್ರೀ ಸಾಯಿಬಾಬಾ ನಿತ್ಯಾನಂದ ಮಂದಿರದ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಗೀತಾ ಪುರುಷೋತ್ತಮ, ರೇಶ್ಮಾ, ವಸಂತಿ ಪ್ರಾರ್ಥಿಸಿದರು. ಟ್ರಸ್ಟಿ ತಾರನಾಥ ಕೊಟ್ಟಾರಿ ಫರಂಗಿಪೇಟೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಮಚ್ಚೇಂದ್ರನಾಥ ಸಾಲ್ಯಾನ್ ವಂದಿಸಿದರು.