ಕಾಸರಗೋಡು, ಅ 06 (DaijiworldNews/SM): ಸಮಾಜ ಅತ್ಯಂತ ಜಾಗೃತರಾಗಿ ಮಾದಕ ವ್ಯಸನದ ವಿರುದ್ಧ ಕಣ್ತೆರೆಯಬೇಕಿದೆ ಎಂದು ಎ. ಕೆ . ಎಂ ಅಶ್ರಫ್ ಹೇಳಿದರು. ಅವರು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಮಾಹಿತಿ ಕಛೇರಿ ಹಾಗೂ ಕಾಲೇಜು ಎನ್ಎಸ್ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಸಪ್ತಾಹದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಜಾಗೃತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಮಕ್ಕಳು ಸೇರಿದಂತೆ ಮಾದಕ ವ್ಯಸನಿಗಳ ಸುದ್ದಿ ಆಘಾತಕಾರಿಯಾಗಿದೆ. ವ್ಯಸನದ ವಿರುದ್ಧದ ಹೋರಾಟ ಸಮಾಜದ ಪ್ರತಿಯೊಬ್ಬರಿಂದಲೂ ಆರಂಭವಾಗಬೇಕು. ಗಾಂಧಿ ಜಯಂತಿ ಸಪ್ತಾಹ ಆಚರಣೆಯ ಹೊರತಾಗಿ ಮಾದಕ ವ್ಯಸನದ ವಿರುದ್ಧ ಸದಾ ಜಾಗೃತರಾಗಿ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು.
ಅಬಕಾರಿ ಪ್ರಿವೆಂಟಿವ್ ಆಫೀಸರ್ ಎನ್.ಜಿ.ರಘುನಾಥ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಸಿದರು. ಕಾಲೇಜು ಪ್ರಭಾರ ಪ್ರಾಚಾರ್ಯ ಪಿ.ಶಿವಶಂಕರ್ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮುಕ್ತ ಸಂದೇಶ ನೀಡಿದರು. ಮಂಜೇಶ್ವ ಬ್ಲಾಕ್ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಹಾಗೂ ಕಾಲೇಜು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಜೀವೇಶ್ ವಿಶ್ವಂಭರನ್ ಮಾತನಾಡಿದರು. ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿ, ಸಹಾಯಕ ಅಧಿಕಾರಿ ಪ್ರದೀಪ್ ನಾರಾಯಣನ್ ವಂದಿಸಿದರು. ಜಾಗೃತಿ ತರಗತಿಯ ನಂತರ ಮಾದಕ ವಸ್ತು ವಿರೋಧಿ ಸಂದೇಶದೊಂದಿಗೆ ಜಾದೂಗಾರ ಬಾಲಚಂದ್ರ ಕೋಟೋಟಿ ಅವರ ಜಾದೂ ಪ್ರದರ್ಶನ ನಡೆಯಿತು.