ಮಂಗಳೂರು, ಅ 06 (DaijiworldNews/DB): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆಯು ಲಕ್ಷಾಂತರ ಭಕ್ತರ ಉಪಸ್ಥಿತಿಯೊಂದಿಗೆ ಗುರುವಾರ ಮುಂಜಾನೆ ಸಂಪನ್ನಗೊಂಡಿತು.
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಬುಧವಾರ ಸಂಜೆ ಕುದ್ರೋಳಿ ಕ್ಷೇತ್ರದಿಂದ ಹೊರಟ ವೈಭವದ ಶೋಭಾಯಾತ್ರೆ ನಗರಾದ್ಯಂತ ಸಂಚರಿಸಿ ಗುರುವಾರ ಮುಂಜಾನೆ ಮತ್ತೆ ಕ್ಷೇತ್ರಕ್ಕೆ ಮರಳಿ ಕ್ಷೇತ್ರದ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಮಹಾ ಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ಕ್ಷೇತ್ರದಿಂದ ಮೆರವಣಿಗೆ ಹೊರಡಲಾಯಿತು. ಮೆರವಣಿಗೆಯು ಕ್ಷೇತ್ರದಿಂದ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್ಬಾಗ್, ಬಲ್ಲಾಳ್ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಗಣಪತಿ ಹೈಸ್ಕೂಲ್ ಮಾರ್ಗವಾಗಿ ರಥಬೀದಿಗೆ ಸಂಚರಿಸಿ ಅಲ್ಲಿಂದ ಅಳಕೆಯ ಮೂಲಕ ಮತ್ತೆ ಕುದ್ರೋಳಿ ದೇವಳಕ್ಕೆ ಆಗಮಿಸಿತು.
ಈ ಬಾರಿ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹವನ್ನು ಮೆರವಣಿಗೆಯಲ್ಲಿ ಮೊದಲು ಕೊಂಡೊಯ್ಯಲಾಯಿತು. ಬಳಿಕ ಸ್ತಬ್ದಚಿತ್ರಗಳು ಸಾಗಿ ಬಂದವು. ಚೆಂಡೆ, ವಾದ್ಯ, ವೈವಿಧ್ಯ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು, ಗೊರವರ ಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಮಹಿಳೆಯರ ವೀರಗಾಸೆ, ಲಂಬಾಣಿ ನೃತ್ಯ, ಕುಣಿತ ಭಜನೆ, ಕೊರಗರ ಡೋಲು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಾಕಾರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.
ಯುವವಾಹಿನಿ ಮಂಗಳೂರು ಘಟಕದ ಮುಂದಾಳತ್ವದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿಯ ವಿವಿಧ ಘಟಕಗಳು, ಶ್ರೀ ನಾರಾಯಣ ಗುರು ಸಂಘಗಳು ಹಾಗೂ ಗುರು ಭಕ್ತರ ಸಹಯೋಗದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಶಿವಗಿರಿ ತೀರ್ಥಾಟನ ಯಾತ್ರೆಯ ಅರಿವಿನ ನಡಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಕ್ಷೇತ್ರದಲ್ಲಿ ಸನ್ಮಾನ
ಶೋಭಾಯಾತ್ರೆಗೂ ಮುನ್ನ ಕುದ್ರೋಳಿ ಶ್ರೀ ಶಾರದೆಯ ಸನ್ನಿಧಿಯಲ್ಲಿ ಸೇವಾಕರ್ತರಾಗಿ ದುಡಿದವರನ್ನು ಕ್ಷೇತ್ರಾಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು. ಬಿ. ಜನಾರ್ದನ ಪೂಜಾರಿಯವರ ಉಪಸ್ಥಿತಿಯಲ್ಲಿ ಸಂಜೆ ವಿಸರ್ಜನ ಪೂಜೆ ನಡೆಯಿತು. ಮೇಯರ್ ಜಯಾನಂದ ಅಂಚನ್, ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಖಜಾಂಚಿ ಪದ್ಮರಾಜ್ ಆರ್, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಡಾ| ಬಿ.ಜಿ. ಸುವರ್ಣ, ಎಂ. ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.