ಉಡುಪಿ, ಅ 05 (DaijiworldNews/MS): ಬಂಟ್ವಾಳದಲ್ಲಿ ’ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂಬ ಪಿಎಫ್ಐ ನ ಗೋಡೆಬರಹದ ವಿಚಾರವಾಗಿ, ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು "ಪಿಎಫ್ಐ ಬ್ಯಾನ್ ಅಥವಾ ಬಂಧನದಿಂದ ಇವರ ಆಟ ಮುಗಿಯೋದಿಲ್ಲ. ಇದರ ಸಾವಿರರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ, ಷಡ್ಯಂತ್ರ ಹಾಗೂ ದೇಶದ್ರೋಹಿ ಪ್ರವೃತ್ತಿಯು ಕೇವಲ ಬ್ಯಾನ್ನಿಂದ ತಡೆಯಲು ಸಾಧ್ಯವಿಲ್ಲ. ಪಿಎಫ್ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಪೋಲಿಸ್ ಗುಪ್ತಚರ ಇಲಾಖೆ ಹಾಗೂ ಸರಕಾರ ಅಲರ್ಟ್ ಆಗಬೇಕು. ಬಂಟ್ವಾಳದ ಬರಹ ಒಂದು ಎಚ್ಚರಿಕೆಯಾಗಿದೆ. ಪಿಎಫ್ಐ ಇನ್ನೂ ಆಕ್ಟೀವ್ ಆಗಿದೆ ಎನ್ನೋದರ ಸಂಕೇತ ಇದು. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೋಲಿಸ್ ಇಲಾಖೆ ಜೊತೆ ಸಹಕರಿಸಬೇಕು" ಎಂದರು.
"ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ ಬಿತ್ತಬೇಕಿತ್ತು. ತುಷ್ಟೀಕರಣ ಮಾಡಿ ಕಾಂಗ್ರೆಸ್ ಅವರನ್ನು ದಾರಿ ತಪ್ಪಿಸಿದ ಪರಿಣಾಮ ಇದು. ಕಾಂಗ್ರೆಸ್ ಮುಸ್ಲಿಮರನ್ನು ಪ್ರತ್ಯೇಕವಾಗಿ ಬೆಳೆಸಿದ್ದು ಇದಕ್ಕೆ ಕಾರಣವಾಗಿದೆ. ಭಯೋತ್ಪಾದನೆ, ಕೊಲೆ, ಗಲಭೆ ಕಾಂಗ್ರೆಸ್ನ ತುಷ್ಟೀಕರಣ ಕೊಡುಗೆಯಾಗಿದೆ. ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ಶೇ 99 ನಂಬಿಕೆ ನನ್ನಲ್ಲಿಲ್ಲ." ಎಂದರು.
"ಆರ್ಎಸ್ಎಸ್ನ ನಾಯಕರು ಮಸೀದಿಗೆ ಭೇಟಿ ಕೊಟ್ಟರೆ ಮನಪರಿವರ್ತನೆ ಆಗುತ್ತದೆ ಎಂದು ನಾನು ಒಪ್ಪುವುದಿಲ್ಲ. ನಮ್ಮ ಶತ್ರು ಯಾರು, ಮಿತ್ರ ಯಾರು ಎಂದು ಹಿಂದೂ ಸಮಾಜಕ್ಕೆ ಸ್ಪಷ್ಟ ಕಲ್ಪನೆ ಇಲ್ಲ. ಹಿಂದೂಗಳೂ ಸಾವಿರಾರು ವರ್ಷದಿಂದ ಸೌಹಾರ್ದತೆಯಲ್ಲೇ ಇದ್ದೇವೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಮಸೀದಿ ಮದರಸಕ್ಕೆ ಹೋಗಿ ಮನವರಿಕೆ ಮಾಡುತ್ತೇವೆ ಎಂಬುದು ಅಸಾಧ್ಯದ ಮಾತು. ಹಿಂದೂ ಬಲಕ್ಕೆ ಪ್ರತಿಬಲವಾಗಿ ಬೆಳೆಯಬೇಕು" ಎಂದು ಹೇಳಿದರು