ಮಂಗಳೂರು, ಅ 04 (DaijiworldNews/DB): ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮುಕ್ಕ ನಿವಾಸಿ ಮುಹಮ್ಮದ್ (65) ಸಾವನ್ನಪ್ಪಿದವರು. ದುಬೈಯಲ್ಲಿ ಮಗಳ ಮನೆಯಲ್ಲಿದ್ದ ಪತ್ನಿಯನ್ನು ಭೇಟಿಯಾಗಿ ಹಿಂತಿರುಗಿದ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಎಮಿಗ್ರೇಶನ್ ವಿಭಾಗದಲ್ಲಿ ನಿರ್ಗಮನದ ಮೊಹರು ಹಾಕಲು ಅಧಿಕಾರಿಗಳಿಗೆ ಪಾಸ್ಪೋರ್ಟ್ ನೀಡಿ ಅಲ್ಲೇ ನಿಂತಿದ್ದರು. ಈ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ.
ಕೂಡಲೇ ವಿಮಾನ ನಿಲ್ದಾಣದ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದರು ಎಂಬುದಾಗಿ ಮುಹಮ್ಮದ್ ಅವರ ಸಹೋದರಿಯ ಪತಿ ಶರೀಫ್ ತಿಳಿಸಿದ್ದಾರೆ.