ಮೂಡುಬಿದಿರೆ, ಫೆ 13 (MSP): ಕಳೆದ ಎಂಟು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಜಗದೀಶ್ (24) ಮಂಗಳವಾರ ಸಂಜೆ ಮೃತಪಟ್ಟರು. ಇವರು ಚಿತ್ರದುರ್ಗದ ಈಚಲನಾಗೇನ ಹಳ್ಳಿ ಮೂಲದವರು.
ಫೆ 4ರಂದು ಜಗದೀಶ್ ಕರ್ತವ್ಯ ನಿಮಿತ್ತ ಮಹಾವೀರ ಕಾಲೇಜು ರಸ್ತೆಯಲ್ಲಿ ತಮ್ಮ ಬೈಕ್ನಲ್ಲಿ ಪೊಲೀಸ್ ಠಾಣೆಗೆ ಬರುತ್ತಿದ್ದಾಗ, ತಪ್ಪು ದಿಕ್ಕಿನಲ್ಲಿ ಬಂದ ಟಿಪ್ಪರ್ ಜಗದೀಶ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ, ಕೋಮಾಕ್ಕೆ ಜಾರಿ ಜೀವನ್ಮರಣ ಸ್ಥಿತಿಯಲ್ಲಿದ್ದರು. ಚಿಕಿತ್ಸೆ ಫಲಿಸದೇ ಮಂಗಳವಾರ ನಿಧನರಾದರು.
ಈಚಲನಾಗೇನ ಹಳ್ಳಿಯ ಹನುಮಂತಪ್ಪ ಅವರ ಮಗನಾದ ಜಗದೀಶ್ ಅವರು 2017ರಲ್ಲಿ ಪೊಲೀಸ್ ತರಬೇತಿ ಮುಗಿಸಿ, 2018ಕ್ಕೆ ಮೂಡುಬಿದಿರೆ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದರು. ಅವರ ಪ್ರೀತಿಸುತ್ತಿದ್ದ ಸಂಬಂಧಿ ಹುಡುಗಿಯ ಜತೆಗೆ ಇದೇ ಫೆ. 22ಕ್ಕೆ ಅವರ ಮದುವೆ ಕೂಡ ನಿಗದಿಯಾಗಿತ್ತು. ತಂದೆತಾಯಿಗೆ ಇವರೊಬ್ಬರೇ ಪುತ್ರರಾಗಿದ್ದು, ಇನ್ನೊಬ್ಬಕೆ ಸಹೋದರಿ ಅಶ್ವಿನಿ ಅವರಿಗೆ ವಿವಾಹವಾಗಿದೆ. ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಇವರ ಸಾವಿನಿಂದ ಮನೆಮಂದಿ ಕಂಗೆಟ್ಟಿದ್ದಾರೆ.
ಕಮಿಷನರ್ ಕಚೇರಿ ಆವರಣದಲ್ಲಿ ಅಂತಿಮ ನಮನ: ಜಿಲ್ಲಾ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಪಣಂಬೂರು ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಮಚಂದ್ರ, ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಮೊದಲಾದ ಅಧಿಕಾರಿಗಳು ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಅಂತಿಮ ದರ್ಶನ ಪಡೆದು, ಇಲಾಖಾ ವತಿಯಿಂದ ಜಗದೀಶ್ಗೆ ಗೌರವ ಸಲ್ಲಿಸಿದರು.
ಬಳಿಕ ಸಂಬಂಧಿಕರು ಜಗದೀಶ್ ಅವರ ಶವವನ್ನು ಹುಟ್ಟೂರಾದ ಚಿತ್ರದುರ್ಗಕ್ಕೆ ಕೊಂಡೊಯ್ಯಲಾಯಿತು.