ಮಂಗಳೂರು, ಅ 04 (DaijiworldNews/MS): ನಾಡಿನೆಲ್ಲೆಡೆ ಮಂಗಳವಾರ ಆಯುಧ ಪೂಜೆ ಮತ್ತು ಬುಧವಾರ ವಿಜಯ ದಶಮಿ ಆಚರಣೆ ಸಂಭ್ರಮ ಕಳೆಗಟ್ಟಿದೆ. ಇನ್ನು ಕರಾವಳಿಯಲ್ಲಿ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದು, ನಗರದ ಎಲ್ಲಾ ದೇವಸ್ಥಾನ ಮಂದಿರಗಳಲ್ಲಿ ವಾಹನಗಳಿಗೆ ಆಯುಧ ಪೂಜೆ ಮಾಡಲಾಯಿತು.
ಆಯುಧ ಪೂಜೆಯ ದಿನದಂದು, ವಾಹನಗಳು ಸೇರಿದಂತೆ ಗ್ಯಾರೇಜ್, ಇಂಜಿನಿಯರಿಂಗ್ ವರ್ಕ್ಸ್ ಶಾಪ್, ಖಾಸಗಿ ಕಚೇರಿಗಳಲ್ಲಿ ಪೂಜೆ ಮಾಡಲಾಯಿತು.ಒಂದು ದಿನ ಮುಂಚಿತವಾಗಿ ಭಕ್ತರು ತಮ್ಮ ವಾಹನಗಳು, ಕಂಪ್ಯೂಟರ್ ಹಾಗೂ ಆಯುಧ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಭಕ್ತರು ದೇವಾಲಯಗಳುಗೆ ತೆರಳಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿದ್ದಾರೆ.
ಹಬ್ಬದ ಹಿನ್ನಲೆ ನಗರದಲ್ಲಿ ಹೂ, ಹಣ್ಣು ವ್ಯಾಪಾರ ಬಿರುಸುಗೊಂಡಿದೆ.ಆಯುಧ ಪೂಜೆಯಂದು ಹೂವಿನ ಜತೆಗೆ ವಾಹನಗಳಿಗೆ ಕಟ್ಟಲು ಬೇಕಾಗುವ ಲಿಂಬೆ ಮತ್ತು ಹಸಿ ಮೆಣಸಿಗೂ ಬೇಡಿಕೆ ಕುದುರಿದ್ದು, ಲಿಂಬೆ ಮತ್ತು ಹಸಿಮೆಣಸಿನಕಾಯಿ ಮಾಲೆ ವ್ಯಾಪಾರವೂ ಬಿರುಸುಗೊಂಡಿದೆ.