ಮಂಗಳೂರು,ಫೆ 13 (MSP): ಮದ್ಯ ಖರೀದಿ ಮಾಡಲು ಹಣ ನೀಡದಕ್ಕೆ ಸಿಟ್ಟಿನಿಂದ ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ವ್ಯಕ್ತಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ರೂ. 16,000 ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ರವಿ (44) ಶಿಕ್ಷೆಗೊಳಗಾದ ಅಪರಾಧಿ. ಈತ ಪತ್ನಿ ರೇಖಾ(38) ಹಾಗೂ ಪುತ್ರಿಯೊಂದಿಗೆ ಪೆರ್ಮನ್ನೂರು ಚೆಂಬುಗುಡ್ಡೆ ಬಳಿ ವಾಸವಾಗಿದ್ದ. 2017ರ ಜುಲೈ 7 ರಂದು ರಂದು ರಾತ್ರಿ ಮದ್ಯಪಾನ ಮಾಡಲು ಹಣ ಕೇಳಿದಾಗ ಪತ್ನಿ ರೇಖಾ ಇಲ್ಲ ಎಂದಾಗ ಅವರನ್ನು ಇರಿದು ಕೊಲ್ಲಲು ಯತ್ನಿಸಿದ್ದ ಪ್ರಕರಣದಲ್ಲಿ ಈತ ಅಪರಾಧಿ ಎಂದು ಸೋಮವಾರ ಪ್ರಕಟಿಸಿರುವ ನ್ಯಾಯಾಲಯ, ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.
ರವಿ ಮದ್ಯ ವ್ಯಸನಿಯಾಗಿದ್ದು ಹಣ ನೀಡುವಂತೆ ಆಗಾಗ ಪತ್ನಿಗೆ ಹಿಂಸೆ ನೀಡುತ್ತಿದ್ದ. ಘಟನೆಯ ದಿನವೂ ರೇಖಾ ಹಣ ನೀಡಲು ನಿರಾಕರಿಸಿದಾಗ ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆಗೆ ಯತ್ನಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವರು ಚೇತರಿಸಿಕೊಂಡಿದ್ದರು.
ಮನೆಯಲ್ಲಿದ್ದ ಮಗಳು, ರೇಖಾ ಅವರ ತಾಯಿ ಮತ್ತು ಪಕ್ಕದ ಮನೆಯ ಯೋಗೀಶ ಎಂಬುವವರು ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಆಗಿನ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಕುಮಾರ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.11 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ, 13 ದಾಖಲೆಗಳು ಹಾಗೂ ಮೂರು ಸಾಂದರ್ಭಿಕ ಸಾಕ್ಷ್ಯಗಳ ಪರಿಶೀಲನೆ ನಡೆಸಿತ್ತು. ಹಲ್ಲೆಗೊಳಗಾಗಿದ್ದ ರೇಖಾ ಕೂಡ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು.
ಸೋಮವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಶಾರದಾ ಬಿ, ‘ರವಿ ಅಪರಾಧಿ’ ಎಂದು ಸಾರಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು.ಕೊಲೆ ಯತ್ನ ನಡೆಸಿರುವುದಕ್ಕೆ 10 ವರ್ಷ ಜೈಲು ಮತ್ತು ರೂ. 10,000 ದಂಡ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಕ್ಕೆ ಒಂದು ವರ್ಷ ಜೈಲು, ತೀವ್ರ ಸ್ವರೂಪದ ಗಾಯ ಮಾಡಿರುವುದಕ್ಕೆ 10 ವರ್ಷ ಜೈಲು ಮತ್ತು ರೂ 6,000 ದಂಡ ಹಾಗೂ ಜೀವ ಬೆದರಿಕೆ ಒಡ್ಡಿರುವುದಕ್ಕೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೊದಲ ಮತ್ತು ಮೂರನೇ ಆರೋಪಗಳಲ್ಲಿ ದಂಡ ಪಾವತಿಗೆ ತಪ್ಪಿದರೆ ಅನುಕ್ರಮವಾಗಿ ಒಂದು ವರ್ಷ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಲಾಗಿದೆ.
ರವಿ ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದು, ಸರಿಯಾಗಿ ಕೆಲಸ ಮಾಡದ ಕಾರಣದಿಂದ ಅವನನ್ನು ಹೊರಹಾಕಲಾಗಿತ್ತು. ರೇಖಾ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರ ಪರಿಹಾರ ಕಾಯ್ದೆಯಡಿ ಅವರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.