Karavali
ಮಂಗಳೂರು: ನವದುರ್ಗೆಯರು, ಶಾರದಾ ಮೂರ್ತಿ ಶೋಭಾಯಾತ್ರೆ-ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
- Mon, Oct 03 2022 06:35:50 PM
-
ಮಂಗಳೂರು, ಅ 03 (DaijiworldNews/DB): ನಗರದ ಶ್ರೀ ಗೋಕರ್ಣನಾಧೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್ಲೋಗಳ ಶೋಭಾಯಾತ್ರೆ ಮತ್ತು ರಥಬೀದಿ ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಅಪಾರ ಜನ ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ್ 5 ಮತ್ತು 6ರಂದು ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ಅ. 5ರಿಂದ ಬದಲಿ ವ್ಯವಸ್ಥೆ
ಶ್ರೀ ಗೋಕರ್ಣನಾಧೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್ಲೋಗಳ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಅಕ್ಟೋಬರ್ 5ರ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 6ರ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ಕೊಟ್ಟಾರ ಚೌಕಿ ಜಂಕ್ಷನ್ ಮುಖಾಂತರ ನಗರಕ್ಕೆ ಬರುವ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ ಹಾಗೂ ವಾಹನಗಳು ಕುಂಟಿಕಾನ, ಕೆ.ಪಿ.ಟಿ, ನಂತೂರು ಮಾರ್ಗವಾಗಿ ನಗರ ಪ್ರವೇಶಿಸುವುದು.
ನಗರದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮುಖೇನ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದಿಂದ ಲಾಲ್ಬಾಗ್ ಮಾರ್ಗವಾಗಿ ಕುಂಟಿಕಾನ ಹಾಗೂ ಕೆಪಿಟಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆ.ಎಸ್.ಆರ್ ರಸ್ತೆಯಿಂದ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಿ.ವಿ.ಎಸ್ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್ ಮೂಲಕ ಸಂಚರಿಸುವುದು. ಅಂಬೇಡ್ಕರ್ ಸರ್ಕಲ್ ಮೂಲಕ ಎಂ.ಜಿ ರಸ್ತೆಗೆ ಸಾಗುವ ವಾಹನಗಳು ಬಂಟ್ಸ್ ಹಾಸ್ಟೆಲ್ನಿಂದ ಸಂಚರಿಸುವುದು.
ನ್ಯೂ ಚಿತ್ರಾ ಜಂಕ್ಷನ್ನಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಮಾರ್ಗವಾಗಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಕಡೆಗೆ ಸಂಚರಿಸುವ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ನ್ಯೂ ಚಿತ್ರಾ ಜಂಕ್ಷನ್ನಿಂದ ಕಂಡತ್ಪಳ್ಳಿ, ಮಂಡಿ, ಕುದ್ರೋಳಿ, ಬೊಕ್ಕಪಟ್ಟ, ಸುಲ್ತಾನ್ಬತ್ತೇರಿ ಮೂಲಕ ಉರ್ವ ಮಾರ್ಕೆಟ್ ಮಾರ್ಗವಾಗಿ ನಗರದಿಂದ ಹೊರ ಹೋಗುವುದು ಹಾಗೂ ನ್ಯೂ ಚಿತ್ರಾ ಜಂಕ್ಷನ್ನಿಂದ ಡೊಂಗರಕೇರಿ ವೆಂಕಟರಮಣ ದೇವಸ್ಥಾನ ಜಂಕ್ಷನ್, ರಾಷ್ಟ್ರ ಕವಿ ಎಂ. ಗೋವಿಂದ ಪೈ ವೃತ್ತ, ಪಿ.ವಿ.ಎಸ್ ಮಾರ್ಗವಾಗಿ ಮುಂದುವರೆದು ಬಂಟ್ಸ್ ಹಾಸ್ಟೆಲ್ ಕಡೆಗೆ ಸಂಚರಿಸುವುದು.
ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಕಡೆಯಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಉರ್ವಾಸ್ಟೋರ್ ಕಡೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಡೆಗೆ ಬರುವ ವಾಹನಗಳು ಕೋಟೆಕಣಿ ರಸ್ತೆಯಾಗಿ ಕೊಟ್ಟಾರಕ್ರಾಸ್, ಕಾಪಿಕಾಡು, ಕೆ.ಎಸ್.ಆರ್.ಟಿ.ಸಿ, ಬಿಜೈ ಮಾರ್ಕೆಟ್ ಜಂಕ್ಷನ್ ಮೂಲಕ ಸಂಚರಿಸುವುದು.
ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಕಡೆಯಿಂದ ಎಂ.ಜಿ. ರಸ್ತೆಗೆ (ಲಾಲ್ಬಾಗ್ ಜಂಕ್ಷನ್ ಕಡೆಗೆ) ಹಾಗೂ ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕುಂಟಿಕಾನ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಬಳಿ ಎಡಕ್ಕೆ ತಿರುಗಿ ಬಿಜೈ ಮಾರ್ಕೆಟ್ ಜಂಕ್ಷನ್ ಮೂಲಕ ಸಂಚರಿಸುವುದು. ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಯಿಂದ ಎಂ.ಜಿ ರಸ್ತೆಗೆ (ಲಾಲ್ಬಾಗ್ ಜಂಕ್ಷನ್ ಕಡೆಗೆ) ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಬಳಿ 'ಯು' ತಿರುವು ಪಡೆದುಕೊಂಡು ಬಿಜೈ ಮಾರ್ಕೆಟ್ ಜಂಕ್ಷನ್ ಕಡೆಗೆ ಸಂಚರಿಸುವುದು.
ಪಶು ಆಸ್ಪತ್ರೆ ಜಂಕ್ಷನ್ (ಕಪುಚಿನ್ ಚರ್ಚ್)ನಿಂದ ಕೋರಿರೊಟ್ಟಿ ಜಂಕ್ಷನ್ (ಎಂ.ಜಿ.ರಸ್ತೆ) ಕಡೆಗೆ ಸಾಗುವ ಎಲ್ಲಾ ವಾಹನ ಸಂಚಾರ ನಿಷೇಧಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಗಳ ಪೈಕಿ ಪಂಪ್ವೆಲ್ ಕಡೆಗೆ ಸಂಚರಿಸುವ ಬಸ್ಸುಗಳು ಕೆ.ಪಿ.ಟಿ ಜಂಕ್ಷನ್ ಮೂಲಕ ಮತ್ತು ಉಡುಪಿ ಕಡೆಗೆ ಸಂಚರಿಸುವ ಬಸ್ಗಳು ಕುಂಟಿಕಾನ ಜಂಕ್ಷನ್ ಮೂಲಕ ಸಂಚರಿಸುವುದು.
ಮೆರವಣಿಗೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಕುದ್ರೋಳಿ ನಾರಾಯಣಗುರು ಕಾಲೇಜು ಬಳಿಯಿಂದ ನವದುರ್ಗೆಯರ ಟ್ಯಾಬ್ಲೊಗಳು ತಯಾರಿಗೊಂಡು ದೇವಸ್ಥಾನಕ್ಕೆ ಬರಲಿರುವುದರಿಂದ ಕುದ್ರೋಳಿ ನಾರಾಯಣ ಗುರು ಕಾಲೇಜು ಜಂಕ್ಷನ್ ರಸ್ತೆಯಿಂದ ಬರ್ಕೆ ಜಂಕ್ಷನ್ ತನಕ ಮತ್ತು ಬರ್ಕೆ ಜಂಕ್ಷನ್ನಿಂದ ದುರ್ಗಾಮಹಲ್ ಜಂಕ್ಷನ್ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್ನಿಂದ ಅಳಕೆ ಬ್ರಿಡ್ಜ್ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಟ್ಯಾಬ್ಲೊಗಳು ಉರ್ವ ಮಾರ್ಕೆಟ್ ಜಂಕ್ಷನ್ನಿಂದ, ಗಾಂಧಿನಗರದಿಂದಾಗಿ ಮಣ್ಣಗುಡ್ಡ ಗುರ್ಜಿ ಜಂಕ್ಷನ್ನಲ್ಲಿ ಸರದಿ ಸಾಲಿನಲ್ಲಿ ಬಂದು ನಿಂತು ಅಲ್ಲಿಂದ ಸದರಿ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಮುಂದುವರೆಯುದರಿಂದ ಮಣ್ಣಗುಡ್ಡ ಗುರ್ಜಿ ಜಂಕ್ಷನ್ನಿಂದ ಉರ್ವ ಮಾರ್ಕೆಟ್ ಜಂಕ್ಷನ್ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಣ್ಣಗುಡ್ಡ ಗಾಂಧಿನಗರ ಪಾರ್ಕ್ ಮುಂಭಾಗದ ರಸ್ತೆ ಮತ್ತು ಗಾಂಧಿನಗರ 1ರಿಂದ 8ರವರೆಗಿನ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅ. 6ರಿಂದ ಬದಲಿ ವ್ಯವಸ್ಥೆ
ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಶಾರದಾ ಮೂರ್ತಿಯ ಶೋಭಾಯಾತ್ರೆಯ ವೇಳೆ ಶಾರದಾ ಮಾತೆಯ ವಿಗ್ರಹ ಹಾಗೂ ವಿವಿಧ ಟ್ಯಾಬ್ಲೋಗಳು ಮತ್ತು ಅಪಾರ ಜನಸಂಖ್ಯೆ ಸೇರುವ ನಿರೀಕ್ಷೆ ಇರುವುದರಿಂದ ಅಕ್ಟೋಬರ್ 6ರ ಗುರುವಾರ ಸಂಜೆ 6 ಗಂಟೆಯಿಂದ ಅಕ್ಟೋಬರ್ 7ರ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.ಬಾಲಾಜಿ ಜಂಕ್ಷನ್ನಿಂದ ರಥಬೀದಿ ವೆಂಕಟರಮಣ ದೇವಸ್ಥಾನದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ಬಾಲಾಜಿ ಜಂಕ್ಷನ್ನಿಂದ ಲೋವರ್ ಕಾರ್ಸ್ಟ್ರೀಟ್ ನಿಂದಾಗಿ ಅಜೀಜುದ್ದೀನ್ ರಸ್ತೆಯ ಮುಖಾಂತರ ಸಂಚರಿಸುವುದು.
ಗಣಪತಿ ಹೈಸ್ಕೂಲ್ ರಸ್ತೆ ಜಂಕ್ಲನ್ ಮುಖಾಂತರ ಕಾರ್ಸ್ಟ್ರೀಟ್ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ತಾರಾ ಕ್ಲಿನಿಕ್ ಮುಂದುಗಡೆಯಿಂದ ಶರವು ದೇವಸ್ಥಾನದ ಎದುರಿನಿಂದಾಗಿ ಕೆ.ಎಸ್.ಆರ್ ರಸ್ತೆ ಮುಖೇನ ಸಂಚರಿಸುವುದು.
ಕೇಂದ್ರ ಮಾರುಕಟ್ಟೆಯಿಂದ ಕಾರ್ಸ್ಟ್ರೀಟ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸದರಿ ವಾಹನಗಳು ಕೇಂದ್ರ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿ ಕ್ಲಾ ಕ್ಟವರ್ ಮುಖೇನ ಮುಂದುವರೆಯುವುದು ಹಾಗೂ ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.