ಉಳ್ಳಾಲ, ಅ 03 (DaijiworldNews/MS): ಪ್ರೀತಿಸುವುದು, ಪ್ರೀತಿಸಲ್ಪಡುವುದು ಮನುಷ್ಯನ ಅಮೂಲ್ಯ ಗುಣ, ಹಿರಿಯ ನಾಗರಿಕರನ್ನು ಕಡೆಗಣಿಸುವುದರಿಂದ ಅವರ ಜೀವನದಲ್ಲಿ ವ್ಯಾಕ್ಯುಲತೆ ಉಂಟಾಗಬಹುದು, ಈ ನಿಟ್ಟಿನಲ್ಲಿ ಮಾನವ ಧರ್ಮದಲ್ಲಿ ಹಿರಿಯ ನಾಗರಿಕರನ್ನು ಸಲಹುವುದು ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದು ಯೇನೆಪೊಯ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ| ಮಹಮ್ಮದ್ ಗುತ್ತಿಗಾರು ಅಭಿಪ್ರಾಯಪಟ್ಟರು.
ಅವರು ಯೇನೆಪೊಯ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಯೋಸಹಜ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ವಿಶ್ವ ವಯೋಸಹಜ ದಿನಾಚರಣೆ ಮತ್ತು ವಯೋಸಹಜ ಹೊರರೋಗಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
1969ರಲ್ಲಿ ಮನುಷ್ಯನ ಜೀವಿತಾವಧಿ 47 ವರ್ಷ ಇತ್ತು. ಇದೀಗ 69 ಕ್ಕೆ ತಲುಪಿದೆ. ಮುಂದುವರಿದ ತಾಂತ್ರಿಕತೆಯಿಂದ ಆರೋಗ್ಯ ವ್ಯವಸ್ಥೆ ಅಭಿವೃದ್ಧಿಯಿಂದ ಮರಣ ಪ್ರಮಾಣ ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯಂತೆ 2032ರಲ್ಲಿ ಹಿರಿಯ ನಾಗರಿಕರ ಸಂಖ್ಯೆ ಯುವಕರ ಸಂಖ್ಯೆಗಿಂತ ಹೆಚ್ಚಾಗಲಿದೆ. ಪ್ರಸ್ತುತ ಕಾಲದಲ್ಲಿ ಯುವಜನಾಂಗ ಅವರನ್ನು ಮಾತ್ರ ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ. ಅವರನ್ನು ಸಾಕಿ, ಸಲಹಿ, ಶಾಲೆಗೆ ಕಳುಹಿಸಿ, ಮನೆಯಲ್ಲಿ ಆರೈಕೆ ನಡೆಸಿದಂತಹ ಹೆತ್ತವರನ್ನು ಆಶ್ರಮಕ್ಕೆ ಬಿಡುವ ಕೆಲಸಗಳಾಗುತ್ತಿದೆ. ಅನಾಥರಾಗಿ ಆಸ್ಪತ್ರೆಗೆ ಬಂದು ತಮ್ಮ ದು:ಖವನ್ನು ಹೇಳುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿದೆ. ಎಲ್ಲವೂ ಯಾಂತ್ರಿಕವಾಗಿರುವುದರಿಂದ ಮನುಷ್ಯ ಧರ್ಮದ ಪಾಲನೆಯಾಗದೆ ಆಸ್ಪತ್ರೆಗೆ ಹಿರಿಯ ನಾಗರಿಕರು ಅನಾಥರಾಗಿ ಬರುವ ಉದಾಹರಣೆಗಳಿವೆ. ಆದಾಯವಿಲ್ಲದೇ ಮುಸ್ಲಿಂ ಸಮುದಾಯದ ಮನೆಗಳಲ್ಲಿಯೂ ಇದೀಗ ಆಶ್ರಮವನ್ನು ಹುಡುಕುವ ಕೆಲಸಗಳಾಗುತ್ತಿರುವುದು ದುರಾದೃಷ್ಟಕರ ಎಂದರು.
ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಪ್ರಕಾಶ್ ಆರ್.ಎಂ. ಸಲ್ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ , ಯೆನೆಪೋಯ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಸೇವೆಯಲ್ಲಿ ಇರುವ ವಿಭಾಗ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ವಯಸ್ಕರಾದಾಗ ಬಹುರೋಗಗಳು ಆರೋಗ್ಯಕ್ಕೆ ಬಾಧಿಸುವುದು. ಇದಕ್ಕಾಗಿ ಮನೋರೋಗ ಶುಶ್ರೂಷೆಯಿಂದ ಹಿಡಿದು ಎಲಾ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ವೈದ್ಯಕೀಯ ವಿಭಾಗ ಕಾರ್ಯಾಚರಿಸುವುದು ಸೂಕ್ತ ಎಂದರು.
ವಯೋಸಹಜ ವಿಭಾಗ ಮುಖ್ಯಸ್ಥೆ ಡಾ| ಪ್ರಭಾ ಅಧಿಕಾರಿ ಮಾತನಾಡಿ , ಆರೋಗ್ಯಕ್ಕಾಗಿ ಜೀವನಶೈಲಿ ಮುಪ್ಪಿಗೆ ಔಷಧ. ಚಿಕ್ಕವರಿರುವಾಗಲೇ ವಯಸ್ಸು ಆಗುತ್ತಲೇ ಹೋಗುವುದು, ಅಂಗಾಂಗಳಿಗೆ ತೊಂದರೆಯಾಗುವ ಮುನ್ನವೇ ಎಚ್ಚೆತ್ತುಕೊಂಡು ಆರೋಗ್ಯ ಕಾಪಾಡಿಕೊಂಡು ಮುಂದುವರಿಯಬೇಕು. ಆರೋಗ್ಯಕ್ಕೆ ಹಿರಿತನ ಬಂದಿರುವುದನ್ನು ಮನಸ್ಸಿನಲ್ಲಿಕೊಂಡು ಇತರರಿಗೆ ಸಲಹೆಯನ್ನು ಕೊಡುತ್ತಾ ಆರೋಗ್ಯಯುತ ಹಾಗೂ ಸಂತಸದಿಂದ ಬಾಳುವ ಮನಸ್ಥಿತಿ ಬೆಳೆಯಲಿ. ರೋಗಿಗಳ ಆರೈಕೆಯಲ್ಲಿ ಹೆಚ್ಚಿನ ಪಾತ್ರ ಮಹಿಳೆಯರಾಗಿರುತ್ತಾರೆ. ಆಸ್ಪತ್ರೆಯಲ್ಲಾಗಲಿ ಮನೆಯಲ್ಲಾಗಲಿ ಮಕ್ಕಳಿನಿಂದ ಹಿಡಿದು ಹಿರಿಯ ನಾಗರಿಕರ ಸೇವೆಯಲ್ಲಿ ಮಹಿಳೆಯರೇ ಜಾಸ್ತಿ. ನಿಮ್ಮ ಆರೋಗ್ಯವನ್ನು ಮೊದಲು ಕಾಪಾಡಿಕೊಂಡು ಆಮೇಲೆ ಮಕ್ಕಳನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಹಾಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಯೋಸಹಜ ವಿಭಾಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಸಿಬಂದಿಗಳಾದ ರತ್ನಾಕರ ಗಟ್ಟಿ, ಶೋಭಾ ಮಾಬೆಲ್, ಚಂದ್ರವಾತಿ, ಸಂತೋಷ್ ಮಾಬೆನ್ ಇವರನ್ನು ಸನ್ಮಾನಿಸಲಾಯಿತು. ಸಬಿತ್ ಸ್ವಾಗತಿಸಿದರು. ಕೃತಾರ್ಥ್ ವಂದಿಸಿದರು. ಲಿನ್ ರೋಡ್ರಿಗಾಸ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭ ಆಸ್ಪತ್ರೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.