ಪಡುಬಿದ್ರಿ, ಫೆ 12(SM): ಆಧುನಿಕ ಕಾಲದಲ್ಲಿ ಒಂದು ಒಳ್ಳೆಯ ಉದ್ಯೋಗ, ಕೈ ತುಂಬಾ ಸಂಪಾದನೆ ಬೇಕೆಂದು ಅಲೆದಾಡುವ ಜನರೆ ಅತ್ಯಧಿಕ. ಆದರೆ ಇದ್ದ ಉದ್ಯೋಗದೊಂದಿಗೆ ಪರ್ಯಾಯ ಕೆಲಸ ಮಾಡಿದರೆ ಆದಾಯ ಹೆಚ್ಚುತ್ತದೆ ಎಂಬುವುದು ಅದೆಷ್ಟೋ ಜನರಿಗೆ ಅರಿವಿಲ್ಲದ ಸಂಗತಿ. ಆದರೆ ಉಡುಪಿ ಸಮೀಪದ ಕಟಪಾಡಿಯ ಯಶೋಧರ ತನಗಿರುವ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಅದರಲ್ಲಿ ಖುಷಿಪಟ್ಟು ಅದರ ಜತೆಗೆ ಕೃಷಿ ಕಾಯಕವನ್ನು ಮಾಡುತ್ತಾ ಬಾಳು ಬೆಳಗಿ ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ.
ಯಶೋಧರ ಓದಿದ್ದು ಪದವಿ. ಬಳಿಕ ಉದ್ಯೋಗ ಅರಸಿ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ಯಾಕೋ ತೃಪ್ತಿಯಿರಲಿಲ್ಲ. ಬಳಿಕ ಊರಿಗೆ ಬಂದು ಇಲ್ಲೇ ಖಾಸಗಿ ಕಂಪೆನಿಯೊಂದಕ್ಕೆ ಉದ್ಯೋಗಕ್ಕೆ ಸೇರಿಕೊಂಡರು. ಈ ನಡುವೆ ಕೃಷಿಕರ ಸಂಘಟನೆಯಲ್ಲಿ ತೋಡಗಿಸಿಕೊಂಡಿದ್ದ ಯಶೋಧರ್ ಕೃಷಿಯತ್ತ ಒಲವು ತೋರಲಾರಂಭಿಸಿದರು. ಇದೀಗ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು ತನ್ನ ಉದ್ಯೋಗದ ಜೊತೆ ಕಲ್ಲಂಗಡಿ ಬೆಳೆದು ಎಲ್ಲರಿಗೂ ಮಾದರಿ ಯುವಕ ಎನಿಸಿಕೊಂಡಿದ್ದಾರೆ.
ಕಟಪಾಡಿಯ ಮಟ್ಟು, ಗುಳ್ಳಕ್ಕೆ ಪ್ರಸಿದ್ದಿ ಪಡೆದ ಊರು. ಇದೆ ಮಣ್ಣಿನಲ್ಲಿ ಯಶೋಧರ್ ಕಲ್ಲಂಗಡಿ ಕೃಷಿಯನ್ನು ಆರು ವರುಷಗಳ ಹಿಂದೆ ಪ್ರಯೋಗಿಕವಾಗಿ ಆರಂಭಿಸಿದ್ದಾರೆ. ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಆರಂಭಸಿದ ಕೃಷಿ ಯಶೋಧರ್ ಅವರ ಕೈಹಿಡಿಯಿತು. ಮನೆಯ ಪಕ್ಕದಲ್ಲಿ ಹಡಿಲು ಬಿದ್ದ ಗದ್ದೆಯನ್ನು ಗುತ್ತಿಗೆಗೆ ಪಡೆದು ಅದರಲ್ಲಿ ಕಲ್ಲಂಗಡಿ ಬೆಳೆಯಲು ಆರಂಭಿಸಿದ್ದಾರೆ. ಈ ಬಾರಿ ಎರಡು ಎಕರೆ ಗದ್ದೆಗಳಲ್ಲಿ ಸುಮಾರು 20,000 ರೂಪಾಯಿ ವೆಚ್ಚದಲ್ಲಿ ಕಲ್ಲಂಗಡಿ ಬೆಳೆಸಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಹಸನಾದ ಬೆಳೆ ಪಡೆದು 40 ಸಾವಿರ ಲಾಭ ಗಳಿಸಿದ್ದಾರೆ ಎಂಬುವುದಾಗಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕ್ರೀಡಾಪಟು ಆಗಿರುವ ಯಶೋಧರ್ ಮುಂಬೈ ಉದ್ಯೋಗ ತೊರೆದು ಊರಿನಲ್ಲೆ ಉದ್ಯೋಗ ಹುಡುಕಿ ಅದರ ಜೊತೆ ಕೃಷಿ ಕ್ಷೇತ್ರದಲ್ಲಿ ಕೂಡ ಸೈ ಅನ್ನಿಸುವ ಸಾಧನೆ ಮಾಡಿದ್ದಾರೆ. ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸುವುದು ಇಂದಿನ ದಿನಗಳಲ್ಲಿ ಕಷ್ಟದ ಮಾತು. ಆದರೆ ಅದನ್ನು ಹವ್ಯಾಸವಾಗಿ, ಉಪವೃತ್ತಿಯಾಗಿ ಸ್ವೀಕರಿಸಿದರೆ ಅದು ಸಂತೃಪ್ತಿಯ ಜೀವನಕ್ಕೆ ದಾರಿದೀಪವಾಗುತ್ತದೆ ಅನ್ನೊದರಲ್ಲಿ ಎರಡು ಮಾತಿಲ್ಲ. ಕೈ ಕೆಸರಾದರೆ ಬಾಯಿ ಮೊಸರು ಅನ್ನೊದಕ್ಕೆ ಸದ್ಯ ಮಟ್ಟು ಕಲ್ಲಂಗಡಿ ಕೃಷಿಕ ಯಶೋಧರ್ ತಾಜಾ ಉದಾಹರಣೆಯಾಗಿದ್ದಾರೆ. ಹಾಗೂ ಉದ್ಯೋಗವಿಲ್ಲವೆಂದು ಕೊರಗುತ್ತಿರುವವರಿಗೆ ಯಶೋಧರ್ ಸ್ಪೋರ್ತಿಯಾಗಿದ್ದಾರೆ.