ಮಂಗಳೂರು, ಅ 03 (DaijiworldNews/DB): ಲೋಕ ಶಿಕ್ಷಣ ನಿರ್ದೇಶನಾಲಯ, ವಯಸ್ಕರ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಬಂಧಿವಾಸಿಗಳಿಗಾಗಿ ’ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಮಂಗಳೂರಿನ ಜಿಲ್ಲಾ ಕಾರಾಗ್ರಹದಲ್ಲಿ ಭಾನುವಾರ ನಡೆಯಿತು.
ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸರ್ವಧರ್ಮದ ಸಹಬಾಳ್ವೆ ಜೀವನವನ್ನು ನಡೆಸಿದಲ್ಲಿ ಸಮಾಜದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಬಂಧಿವಾಸಿಗಳು ಸಿಕ್ಕಂತಹ ಅವಕಾಶವನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಬೇಕು ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಲೋಕೇಶ ಪಿ. ಮಾತನಾಡಿ, ಬಂಧಿವಾಸಿಗಳು ಜೀವನದಲ್ಲಿ ತಾಳ್ಮೆ, ಸಹನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅನುಸರಿಸುತ್ತಾ ಜೀವನದಲ್ಲಿ ಉತ್ಸುಕತೆ ಹೊಂದಬೇಕು. ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಶ್ಚಟಗಳಿಂದ ಮುಕ್ತರಾಗಿ ಸ್ವತಂತ್ರ, ಸ್ವಾವಲಂಬಿ ಜೀವನ ಸಾಗಿಸಲು ಮಹಾತ್ಮ ಗಾಂಧೀಜಿಯವರ ಜೀವನದ ಆದರ್ಶಗಳು ನಮಗೆ ಇಂದಿಗೂ ದಾರಿದೀಪ ಎಂದರು.
ನ್ಯಾಯವಾದಿ ಕವಿತಾ ಮುರಗೇಶ್, ರೋಶನಿ ನಿಲಯ ಕಾಲೇಜಿನ ವಿಭಾಗ ಮುಖ್ಯಸ್ಥೆ ಸಾರಿಕಾ, ಸಹಾಯಕ ಅಧೀಕ್ಷಕ ರಾಜೇಂದ್ರ ಕೊರ್ಪಡೆ, ಜೈಲರ್ ಚನ್ನಮ್ಮ ಬಿದರಿ ಉಪಸ್ಥಿತರಿದ್ದರು. ಶಿಕ್ಷಕ ಸುಬ್ರಹ್ಮಣ್ಯ ನಿರೂಪಿಸಿದರು.
ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರಿಗೆ ಗೀತಗಾಯನದ ಮೂಲಕ ನಮನ ಸಲ್ಲಿಸಿದರು.