ಮಂಗಳೂರು, ಅ 02 (DaijiworldNews/HR): ನೆಹರೂ ಮೈದಾನದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುಡ್ಲದ ಪಿಲಿ ಪರ್ಬ 2022 (ಹುಲಿ ನೃತ್ಯ ಸ್ಪರ್ಧೆ) ಮೊದಲ ಆವೃತ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಅವರು ಇತರ ಗಣ್ಯರೊಂದಿಗೆ ಉದ್ಘಾಟಿಸಿದ್ದಾರೆ.
ಹುಲಿ ನೃತ್ಯ ಸ್ಪರ್ಧೆಯಲ್ಲಿ 12 ತಂಡಗಳು ಭಾಗವಹಿಸಿದ್ದು, ಸಾಂಪ್ರಾದಾಯಕ ಹುಲಿ ನೃತ್ಯ ಸ್ಪರ್ಧೆ ಎಲ್ಲರನ್ನು ಗಮನ ಸೆಳೆದಿದೆ.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಚಿವ ಸುನೀಲ್ ಕುಮಾರ್ ಅವರು ತಮ್ಮ ಇಲಾಖೆಯಿಂದ ಕಾರ್ಯಕ್ರಮಕ್ಕೆ 5 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳನ್ನು ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಆಚರಿಸಲಿದೆ. ಉತ್ತಮ ಪ್ರದರ್ಶನ ನೀಡುವ ಹುಲಿ ನೃತ್ಯಗಾರರಿಗೆ ರಾಜ್ಯಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.
ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ನಾಡಿನ ಕಲೆಗೆ ಪ್ರಾಧಾನ್ಯತೆ ನೀಡಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉತ್ತಮ ಮೂರು ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಇತರ ತಂಡಗಳನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮಾಜಿ ಮೇಯರ್ಗಳಾದ ದಿವಾಕರ್ ಪಾಂಡೇಶ್ವರ್, ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.