ಕಾರ್ಕಳ, ಅ 02 (DaijiworldNews/HR): ಭುವನೇಂದ್ರ ಕಾಲೇಜು ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಳಿಂಗಸರ್ಪವೊಂದು ಹರಿದಾಡುತ್ತಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು, ಶನಿವಾರದಂದು ಸ್ಥಳೀಯ ಕೌನ್ಸಿಲರ್ ಹರೀಶ್ ದೇವಾಡಿಗ ಅವರ ಅಂಗಳದಲ್ಲಿ ಕಾಳಿಂಗ ಸರ್ಪವು ಸುಮಾರು 12 ನಿಮಿಷಗಳ ವರೆಗೆ ಇತ್ತು ಎನ್ನಲಾಗಿದೆ.
ಮಾಹಿತಿ ತಿಳಿದ ಉರಗ ಪ್ರೇಮಿ ಅನಿಲ್ ಪ್ರಭು ಘಟನಾ ಸ್ಥಳಕ್ಕೆ ಅಗಮಿಸುತ್ತಿದ್ದಂತೆ ಕಾಳಿಂಗ ಸರ್ಪ ತನ್ನ ದಾರಿಗೆ ಹೊರಟು ಹೋಗಿತ್ತು. ಸುಮಾರು 17 ಅಡಿ ಉದ್ದದ ಕಾಳಿಂಗ ಸರ್ಪ ಅದಾಗಿದ್ದು, ಸೆರೆ ಹಿಡಿಯುವ ಕಾರ್ಯಚರಣೆಗೆ ಉರಗ ಪ್ರೇಮಿ ಅನಿಲ್ ಪ್ರಭು ಮುಂದಾಗಿದ್ದರೂ ಅದು ಪತ್ತೆಯಾಗದ ಹಿನ್ನಲೆಯಲ್ಲಿ ವಿಫಲರಾಗಿದ್ದಾರೆ.
ಉರಗಪ್ರೇಮಿಯಾಗಿರುವ ಅನಿಲ್ಪ್ರಭು ಅವರು ಅರಣ್ಯ ಇಲಾಖೆಯ ನಿರ್ದೇಶನದಂತೆ ಮನೆ ಪರಿಸರದಲ್ಲಿ ಕಾಣಿಸಿಕೊಳ್ಳುವ ಕಾಳಿಂಗ ಸರ್ಪ, ನಾಗರ ಹಾವು, ಹೆಬ್ಬಾವು ಸೇರಿದಂತೆ ವಿಷಪೂರಿತ ಹಾಗೂ ವಿಷ ರಹಿತ ಅಸಂಖ್ಯಾತ ಉರಗಗಳನ್ನು ಸೆರೆ ಹಿರಿದು ಅರಣ್ಯಪ್ರದೇಶಕ್ಕೆ ಬಿಟ್ಟು ಬರುತ್ತಿದ್ದು, ಅನಿಲ್ ಪ್ರಭು ಅವರು ಸೇವಾ ರೂಪದಲ್ಲಿ ಈ ಕಾರ್ಯವನ್ನು ನಡೆಸುತ್ತಾ ಜನಮೆಚ್ಚುಗೆಗೆ ಕಾರಣರಾಗಿದ್ದಾರೆ.
ಇನ್ನು ಗಾಯಗೊಂಡ ಉರಗಗಳಿಗೆ ತನ್ನ ಮನೆಯಲ್ಲಿ ಉಪಶಮನ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದರು. ಈ ನಡುವೆ ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ನಾಗರಹಾವು ದಾಳಿ ನಡೆಸಿ ಕಡಿದು ಗಾಯಗೊಳಿಸಿದ ಘಟನಾವಳಿಯೂ ನಡೆದಿದೆ. ಬರೋಬರೀ ನಾಲ್ಕು ಬಾರಿ ನಾಗರ ಹಾವು ಕಡಿದಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದ ಅವರು ಮಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆದು ಬದುಕಿ ಉಳಿದಿದ್ದಾರೆ.
ದೈಜಿವರ್ಲ್ಡ್ ವಾಹಿನಿ ಈ ಕುರಿತು ಮಾನವೀಯ ವರದಿ ಪ್ರಕಟಿಸಿತ್ತು. ಸಾರ್ವಜನಿಕರು, ಅರಣ್ಯ ಇಲಾಖೆ ಹಾಗೂ ಸಂಘ-ಸಂಸ್ಥೆಗಳು ನೀಡಿದ ಧನಸಹಾಯವು ಆಸ್ಪತ್ರೆಯ ಚಿಕಿತ್ಸೆ ವೆಚ್ಚಕ್ಕೆ ನೆರವಾಗಿತ್ತು.