ಉಡುಪಿ, ಅ 02 (DaijiworldNews/DB): ಗಾಂಜಾ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ವ್ಯಕ್ತಿಗೆ ಮೂರು ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಆದೇಶಿಸಿದ್ದಾರೆ.
ಮಹಾರಾಷ್ಟ್ರದ ಅವಿನಾಶ್ ದಿಗಂಬರ್ ಲೋಖಂಡೆ ಶಿಕ್ಷೆಗೊಳಗಾದಾತ. 2019ರ ಜುಲೈ 24ರಂದು ಅಂದಿನ ಎಸ್ಪಿ ನಿಶಾ ಜೇಮ್ಸ್ ಅವರ ನಿರ್ದೇಶನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಅವರು ಕಾರ್ಯಾಚರಣೆಗಿಳಿದು, ಇಂದ್ರಾಳಿ ರೈಲು ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಈತ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಗಾಂಜಾ ತಂದಿದ್ದ. ಆತನಿಂದ 40 ಸಾವಿರ ರೂ. ಮೌಲ್ಯದ 2 ಕೆಜಿ 20 ಗ್ರಾಂ ತೂಕದ ಗಾಂಜಾ, ಮೊಬೈಲ್ ಹ್ಯಾಂಡ್ಸೆಟ್ ಸಹಿತ ಒಟ್ಟು 45 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಸೆನ್ ಅಪರಾಧ ಪೊಲೀಸ್ ಠಾಣೆಯ ಎಸ್ಐ ನಾರಾಯಣ ಅವರು ನ್ಯಾಯಾಲಯಕ್ಕೆ 2020 ಮಾರ್ಚ್ 23ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು.