ಉಪ್ಪಿನಂಗಡಿ, ಅ 02 (DaijiworldNews/DB): ಚಿನ್ನಾಭರಣ ಅಂಗಡಿ ತೆರೆಯುತ್ತಿದ್ದು, ಜ್ಯೋತಿಷಿ ಸಲಹೆ ಪ್ರಕಾರ ಪತಿವ್ರತ ಮಹಿಳೆಯ ಮಾಂಗಲ್ಯ ಸರ ಸ್ಪರ್ಶಿಸಿದ ನೋಟನ್ನು ಅಂಗಡಿಯಲ್ಲಿಟ್ಟುಕೊಳ್ಳಲು ಮಾಂಗಲ್ಯ ಸರವನ್ನು ನೋಟಿಗೆ ಸ್ಪರ್ಶಿಸಿ ನೀಡಿ ಎಂದು ಮಹಿಳೆಯನ್ನು ನಂಬಿಸಿ ಅರ್ಚಕರ ಪತ್ನಿಯ ಕತ್ತಿನಲ್ಲಿದ್ದ ಮೂರೂವರೆ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಹಾಡುಹಗಲೇ ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ರಥಬೀದಿಯಲ್ಲಿರುವ ದೇಗುಲಕ್ಕೆ ಹೋಗುವ ದಾರಿಯಲ್ಲಿ ಅರ್ಚಕರ ಮನೆಯಿದ್ದು, ವ್ಯಕ್ತಿಯೊಬ್ಬ ಮನೆ ಬಾಗಿಲಿಗೆ ಬಂದಿದ್ದ. ಅಲ್ಲಿ ಅರ್ಚಕರ ಪತ್ನಿಯಲ್ಲಿ ಮಾತನಾಡುತ್ತಾ ತನಗೆ ಸೂತಕ ಇರುವುದರಿಂದ ದೇವಳಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ನನ್ನ ಪರವಾಗಿ 300 ರೂ.ಗಳನ್ನು ದೇವರಿಗೆ ಹರಕೆ ಹಾಕಿ ಎಂದು 100 ರೂ.ಗಳ ತಲಾ ಮೂರು ನೋಟುಗಳನ್ನು ಮಹಿಳೆಗೆ ನೀಡಿದ್ದ. ಬಳಿಕ ಒಂದು ನೋಟನ್ನು ಹಿಂಪಡೆದು ಪುನಃ ಅವರ ಕೈಗಿತ್ತು ಆ ನೋಟಿಗೆ ಮಾಂಗಲ್ಯ ಸರ ಸ್ಪರ್ಶಿಸಿ ನೀಡುವಂತೆ ಹೇಳಿದ್ದ. ಆದರೆ ಇದರಿಂದ ಅನುಮಾನಗೊಂಡ ಮಹಿಳೆ ಮಾಂಗಲ್ಯ ಸರವನ್ನು ಯಾಕೆ ಸ್ಪರ್ಶಿಸಬೇಕೆಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ನಾನು ಊರಿನಲ್ಲಿ ಚಿನ್ನಾಭರಣ ಅಂಗಡಿ ತೆರೆಯಲಿದ್ದು, ಪತಿವ್ರತ ಮಹಿಳೆಯರು ಮಾಂಗಲ್ಯ ಸರ ಸ್ಪರ್ಶಿಸಿದ ಹಣವನ್ನು ಅಂಗಡಿಯೊಳಗೆ ಇಟ್ಟುಕೊಂಡರೆ ಕ್ಷೇಮವಾಗುತ್ತದೆ ಎಂದು ಜ್ಯೋತಿಷಿಗಳು ಸೂಚಿಸಿದ್ದಾರೆ ಎಂದಿದ್ದ.
ಇದನ್ನು ನಂಬಿದ ಮಹಿಳೆ ಮಾಂಗಲ್ಯ ಸರವನ್ನು ಸ್ಪರ್ಶಿಸಿ ನೀಡಿದ್ದಾರೆ. ಆದರೆ ಆತ ಹೀಗಲ್ಲ, ಸರವನ್ನು ತೆಗೆದು ನೋಟಿನಲ್ಲಿಟ್ಟು ನೀಡಿ ಎಂದಾಗ ಮಹಿಳೆ ಅದೇ ರೀತಿ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ನೋಟಿನೊಂದಿಗೆ ಸರವನ್ನು ಪಡೆದುಕೊಂಡು ಆತ ಪರಾರಿಯಾಗಿದ್ದಾನೆ. ಮಹಿಳೆ ವಾಸ್ತವ ಸ್ಥಿತಿಗೆ ಬರುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದು, ಮಾಂಗಲ್ಯ ಸರ ಕೊರಳಲ್ಲಿ ಇಲ್ಲದಿರುವುದನ್ನು ಕಂಡು ಬೊಬ್ಬೆ ಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದ.