ಕುಂದಾಪುರ, ಅ 01 (DaijiworldNews/HR): ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದನ್ನು ಒಪ್ಪುತ್ತೇವೆ. ಅನಗತ್ಯವಾಗಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದನ್ನು ವಿರೋಧಿಸುತ್ತೇವೆ. ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದ್ದರೂ ಕೂಡಾ ಸಂಬಂಧಪಟ್ಟ ಇಲಾಖೆಗಳು ಪಾಲಿಸುತ್ತಿಲ್ಲ. ಮಸೀದಿಗಳಲ್ಲಿ ಮೈಕ್ ನಿರ್ಭಂಧಿಸಲು ರಾಜ್ಯ ಸರ್ಕಾರಕ್ಕೆ, ಇಲಾಖೆಗಳಿಗೆ ಆಗುವುದಿಲ್ಲ ಎಂದಾದರೆ ಅವು ಕತ್ತೆ ಕಾಯುತ್ತಿವೆಯಾ? ಇನ್ನಾದರೂ ಸರ್ಕಾರ ಕೂಡಲೆ ಕಾರ್ಯಪ್ರವೃತ್ತರಾಗದೆ ಇದ್ದರೆ ನಾವೇ ಮುಂದಿನ ದಿನಗಳಲ್ಲಿ ಮಸೀದಿಯಲ್ಲಿನ ಮೈಕ್ಗಳನ್ನು ಕಿತ್ತು ಹಾಕುತ್ತೇವೆ ಎಂದು ಶ್ರೀರಾಮ ಸೇವೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಕುಂದಾಪುರದ ಹೋಟೆಲ್ ಶರೋನ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಪ್ರವೀನ್ ನೆಟ್ಟಾರು ಪತ್ನಿಗೆ ಸಿ.ಎಂ. ಕಛೇರಿಯಲ್ಲಿ ನೌಕರಿ ಕಲ್ಪಿಸಿರುವ ಬಗ್ಗೆ ಆದೇಶವಾಗಿರುದನ್ನು ಸ್ವಾಗತಿಸುತ್ತೇವೆ. ಸರ್ಕಾರವನ್ನು ಅಬಿನಂದಿಸುತ್ತೇವೆ. ಆದರೆ ಅವರಿಗೆ ಪುತ್ತೂರು ಭಾಗದಲ್ಲಿಯೇ ಖಾಯಂ ನೌಕರಿ ಕೊಡಬೇಕಿತ್ತು. ಗುತ್ತಿಗೆ ಆಧಾರದ ನೌಕರಿಯಲ್ಲಿ ಯಾವಾಗ ಬೇಕಾದರೂ ರದ್ದು ಮಾಡಬಹುದು, ಅಲ್ಲಿ ಅಭದ್ರತೆ, ಅಸುರಕ್ಷತೆ ಆಗುತ್ತದೆ. ಹಾಗಾಗಿ ಖಾಯಂ ನೌಕರಿ ಕೊಡಬೇಕು ಎಂದರು.
ಪಿಎಫ್ಐ ಸಂಘಟನೆಯ ವಿರುದ್ಧ ಕೇಂದ್ರ ಸರ್ಕಾರ ಯೋಗ್ಯ ಕ್ರಮವನ್ನೇ ತಗೆದುಕೊಂಡಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಬಹಳ ಒಳ್ಳೆಯ ಬೆಳವಣಿಗೆ. ಶ್ರೀರಾಮ ಸೇನೆ ಆರಂಭದಿಂದಲೇ ಈ ಬಗ್ಗೆ ಹೋರಾಟ ಮಾಡಿಕೊಂಡು ಬರುತ್ತಿದ್ದು ಅದಕ್ಕೆ ಈಗ ಬೆಲೆ ಸಿಕ್ಕಿದೆ ಎಂದರು. ಪಿಎಫ್ಐ ಜಾಲ ಬಹಳ ದೊಡ್ಡ ಪ್ರಮಾಣದಲ್ಲಿದ್ದು, ಇನ್ನೂ ಆಳವಾಗಿ ತನಿಖೆಯಾಗಬೇಕು, ಅವುಗಳ ಬೇರು ಆಳವಾಗಿ ಬಿಟ್ಟಿವೆ. ದೇಶದ್ರೋಹಿ ಸಂಘಟನೆಗಳ ಬೇರುಗಳನ್ನು ಬುಡ ಸಹಿತ ಕಿತ್ತು ಹಾಕುವ ಕೆಲಸ ಆಗಬೇಕು. ಈ ಬಗ್ಗೆ ಶ್ರೀರಾಮ ಸೇನೆಯಲ್ಲಿ ಸಾಕಷ್ಟು ಮಾಹಿತಿ ಇದ್ದು ಅದನ್ನು ಗೃಹ ಸಚಿವರಿಗೆ ಸಲ್ಲಿಸಲಿದೆ ಎಂದಿದ್ದಾರೆ.
ಕುಂದಾಪುರದ ಹಳೆ ಬಸ್ ನಿಲ್ದಾಣದ ಬಳಿ ರಸ್ತೆ ಅಭಿವೃದ್ದಿ ಮಾಡಲು ಅಲ್ಲಿನ ಕೆಲವು ಮುಸ್ಲಿಂ ಅಡ್ಡಿ ಪಡಿಸುತ್ತಿದ್ದಾರೆ. ಕೂಡಲೇ ಈ ರಸ್ತೆಯನ್ನು ಅಭಿವೃದ್ದಿ ಪಡಿಸಬೇಕು. ಅಡ್ಡಿಪಡಿಸುವ ಯತ್ನಗಳು ಆದರೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಬೇಕು ಎಂದರು.
ಕುಂದಾಪುರದ ಸರಕಾರಿ ಶಿಕ್ಷಣ ಸಂಸ್ಥೆಯ ಆವರಣದೊಳಗೆ ದರ್ಗಾ ಗೋಡೆ ಇದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಯ ಆವರಣದೊಳಗೆ ಇದು ಸರಿಯಲ್ಲ. ಈ ಬಗ್ಗೆ ದಾಖಲೆಯನ್ನು ತಗೆದು ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ಇನ್ನು ಪರೇಶ ಮೇಸ್ತ ಕೊಲೆ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. ತನಿಖಾ ಸಂಸ್ಥೆ ಸರಿಯಾಗಿ ತನಿಖೆ ನಡೆಸಿಲ್ಲ. ಪರೇಶ ಮೇಸ್ತನ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಹಾಗೂ ಪರೇಶ ಮೇಸ್ತ, ರುದ್ರೇಶ ಅವರ ಕುಟುಂಬಗಳು ಅತಂತ್ರವಾಗಿದೆ. ಈ ರೀತಿ ಕೊಲೆಯಾದ ಸಂತೃಸ್ತ ಕುಟುಂಬಗಳ ಆರ್ಥಿಕ ಸ್ಥಿತಿಗತಿಯನ್ನು ಸರ್ಕಾರ ಗಮನಿಸಿ ಸೂಕ್ತ ಭದ್ರತೆ ಒದಗಿಸಬೇಕು ಎಂದಿದ್ದಾರೆ.
ಅಸ್ಪ್ರಶ್ಯತೆ ಆಚರಣೆ ಮಾಡುವುದನ್ನು ವಿರೋಧಿಸುತ್ತಾರೆ. ದೇವರಿಗೇ ಇಲ್ಲದ ಬೇಧಭಾವವನ್ನು ಯಾರೂ ಮಾಡಬಾರದು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಅಸ್ಪ್ರಶ್ಯತೆ ಆಚರಣೆ ಸಂಪೂರ್ಣವಾಗಿ ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಮೋಹನ್ ಭಟ್, ಜಿಲ್ಲಾ ಅಧ್ಯಕ್ಷ ಜಯರಾಮ ಅಂಬೆಕಲ್ಲು, ಶ್ರೀರಾಮ ಸೇನೆ ಮುಖಂಡರಾದ ರಾಮಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಪೂಜಾರಿ ಉಪಸ್ಥಿತರಿದ್ದರು.