ಮಂಗಳೂರು, ಅ 01 (DaijiworldNews/DB): ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ವೃತ್ತ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸ್ವೀಕರಿಸಲಾಗಿದೆ.
ಆಗಸ್ಟ್14ರಂದು ಸುರತ್ಕಲ್ ಫ್ಲೈ ಓವರ್ ಪಿಲ್ಲರ್ ಮೇಲೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬ್ಯಾನರ್ ಅಳವಡಿಸಿರುವುದು (ಫೈಲ್ ಫೋಟೋ)
ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ವೃತ್ತಕ್ಕೆ ವೀರ ಸಾವರ್ಕರ್ ಹೆಸರನ್ನು ಮರುನಾಮಕರಣ ಮಾಡುವ ಪ್ರಸ್ತಾವವನ್ನು ಸಭೆಯ ಮುಂದಿಟ್ಟಿದ್ದರು. 2021ರ ಆಗಸ್ಟ್ 3ರಂದು ನಡೆದ ಸಭೆಯಲ್ಲಿ ಸ್ಟ್ಯಾಂಡಿಂಗ್ ಕಮಿಟಿಗೆ ಕಳುಹಿಸಲಾಗಿತ್ತು. ಆದರೆ ಪಾಲಿಕೆ ಸದಸ್ಯರಾದ ಎ.ಸಿ. ವಿನಯರಾಜ್, ಶಂಶಾದ್ ಅಬೂಬಕ್ಕರ್, ಮುನೀಬ್ ಬೆಂಗ್ರೆ ಹಾಗೂ ವರುಣ್ ಚೌಟ ಇದನ್ನು ವಿರೋಧಿಸಿದ್ದರು. ಬಳಿಕ ಸ್ಟ್ಯಾಂಡಿಂಗ್ ಕಮಿಟಿಯು ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿತ್ತು. ಈ ವೇಳೆಯೂ ಸದಸ್ಯರಾದ ಕೇಶವ ಮತ್ತು ಶಂಶುದ್ದೀನ್ ಅವರು ವಿರೋಧಿಸಿದ್ದರು.
ಸದ್ಯ ಪ್ರಸ್ತಾವವನ್ನು ಪಾಲಿಕೆ ಸ್ವೀಕರಿಸಿದ್ದು, ಈ ಸಂಬಂಧ ದಿನಪತ್ರಿಕೆಗಳಲ್ಲಿ ಮಾಹಿತಿ ನೀಡಿ ಜನರಿಂದ ಸಲಹೆಗಳನ್ನು ಆಹ್ವಾನಿಸಲಿದೆ. ಆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಕೆಲ ತಿಂಗಳ ಹಿಂದಷ್ಟೇ ಈ ಜಂಕ್ಷನ್ನಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದನ್ನು ಕೆಲವು ನಾಗರಿಕರು ವಿರೋಧಿಸಿದ್ದರು. ಬಳಿಕ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ತೆರವುಗೊಳಿಸಿದ್ದರು.