ಮಂಗಳೂರು, ಫೆ 12 (MSP): 2014 ಲೋಕಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶವೇ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮರುಕಳಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆ.12 ಮಂಗಳವಾರ, ಕರಾವಳಿಯ ದೇವಾಲಯ ಭೇಟಿಗಾಗಿ, ಬಜ್ಪೆ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದಿಳಿದ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ, ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು. 2014 ರಲ್ಲಿ ದೇಶದ ಜನತೆ ಮೋದಿ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಪರ ಫಲಿತಾಂಶ ನೀಡಿದ್ದಾರೆ. ಇದೇ ಫಲಿತಾಂಶ 2019 ರ ಲೋಕಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ. ಭಾರತೀಯ ಜನತಾ ಪಕ್ಷವೂ 300ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು, ಮತ್ತೆ ಆಡಳಿತ ಪಕ್ಷವಾಗಿ ಹೊರಹೊಮ್ಮಲಿದೆ. ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಮೋದಿ ಸರ್ಕಾರ ಏನು ಮಾಡಲಿಲ್ಲ ಹೇಳಿ? ಆದರೆ ಇದ್ಯಾವುದು ಕೂಡಾ ಕಾಂಗ್ರೆಸ್ ಮನೆಗೆ ತಲುಪಲಿಲ್ಲ ಎಂದು ಹೇಳಿದರು.
ಪ್ರಹ್ಲಾದ್ ಮೋದಿ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎನ್ನುವ ವದಂತಿಗೆ ಉತ್ತರಿಸಿದ ಅವರು, ನಾನು ಯಾರನ್ನೂ ಬೇಟಿಯಾಗಿಲ್ಲ, ಕೋಲ್ಕತ್ತಾಕ್ಕೂ ಭೇಟಿ ನೀಡಿಲ್ಲ ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ಉತ್ತರಿಸಿದರು.
ಸಕ್ರಿಯಾ ರಾಜಕಾರಣಕ್ಕೆ ಪ್ರಿಯಾಂಕ ವಾದ್ರಾ ಪ್ರವೇಶ ಮಾಡಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಯಾಂಕಾ ಅಥವಾ ಇನ್ಯಾರೇ ಪ್ರವೇಶಿಸಿದರೂ ಮುಖ್ಯವಾಗುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಜನರ ಮನಸ್ಸಿನಲ್ಲಿ ಏನಿದೆಎನ್ನುವುದು ಮುಖ್ಯವಾಗಿದೆ ಎಂದರು.
ಪತ್ರಕರ್ತರು ಪ್ರಹ್ಲಾದ್ ಮೋದಿ ಅವರಲ್ಲಿ ನೀವು ರಾಜಕೀಯ ಪ್ರವೇಶ ಮಾಡುತ್ತೀರಾ ಎಂದಾಗ , ರಾಜಕೀಯದಲ್ಲಿ ಒಬ್ಬರು ಇರೋದು ಸಾಕಾಗುವುದಿಲ್ಲವೇ? ಯಾಕೆ ಇಬ್ಬರ ಅಗತ್ಯವಿದೆಯೇ , ವಿರೋದಿಗಳಿಗೆ ಮೋದಿ ಭಯ ಸಾಲುವುದಿಲ್ಲವೇ? ಎಂದು ಹೇಳಿದರು.