ಉಡುಪಿ, ಸೆ.30 (DaijiworldNews/SM): ದ್ವೇಷವು ನಮ್ಮನ್ನು ನಾಶಪಡಿಸುತ್ತದೆ, ಶಾಂತಿ ಪ್ರೀತಿ ಯು ನಮ್ಮನ್ನು ಪೊರೆಯುತ್ತದೆ ಎಂಬ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ದ್ವೇಷದ ಮನಸ್ಸು ಗಳನ್ನು ಪ್ರೀತಿಯಡೆಗೆ ನಡೆಸುವ ಸಲುವಾಗಿ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಿ ಅಕ್ಟೋಬರ್ 1 ಮತ್ತು ಅಕ್ಟೊಬರ್ 2ರಂದು ಸದ್ಬಾವನಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಸಹಬಾಳ್ವೆ ಉಡುಪಿ ಇದರ ಮುಖಂಡರಾದ ಪ್ರಶಾಂತ್ ಜತ್ತನ್ನ ತಿಳಿಸಿದರು.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು " ಮೇ 14 ರಂದು ಸಹಬಾಳ್ವೆ ವತಿಯಿಂದ ಸಹಬಾಳ್ವೆ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಬಾರಿ ಸಬ್ ಕೊ ಸನ್ಮತಿ ದೇ ಭಗವಾನ್ ಎಂಬ ಘೋಷ ವಾಕ್ಯದಡಿಯಲ್ಲಿ ರಾಜ್ಯಾದ್ಯಂತ ಸದ್ಬಾವನಾ ದಿನವನ್ನು ಆಚರಿಸಲಾಗುವುದು.
ಅಕ್ಟೋಬರ್ 2ರಂದು ಬೆಳಿಗ್ಗೆ 10 ಗಂಟೆಗೆ ಬನ್ನಂಜೆ ನಾರಾಯಣ ಗುರು ಸಭಾಭವನ ವಠಾರದಿಂದ ಪಾದ ಯಾತ್ರೆ ಪ್ರಾರಂಭವಾಗಿ ಜಮ್ಮಾ ಮಸ್ಜೀದ್- ಮದರ್ ಆಫ್ ಸಾರೊಸ್ ಚರ್ಚ್ ಮೂಲಕವಾಗಿ ಅಜ್ಜರಕಾಡಿನ ಗಾಂಧೀ ಉದ್ಯಾನವನದಲ್ಲಿ ಸಮಾಪ್ತಿಯಾಗಲಿದೆ.
ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ಕಾಪು ಬಸ್ ನಿಲ್ದಾಣದಲ್ಲಿ, ಅಕ್ಟೋಬರ್ 2ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಬಾ್ ನಿಲ್ದಾಣದ ಬಳಿ, ಸಂಜೆ 4:30ಕ್ಕೆ ಕಾರ್ಕಳ ಗಾಂಧಿ ಮೈದಾನದಲ್ಲಿ, ಮತ್ತು ಸಂಜೆ 6:30ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಇಬ್ರಾಹಿಂ ಕೋಟ, ಪ್ರೋ ಫಣಿರಾಜ್, ಸುಂದರ್ ಮಾಸ್ತರ್, ಯಾಸಿನ್ ಮಲ್ಪೆ, ಮೇರಿ ಡಿಸೋಜಾ, ಅಜೀಜ್ ಉಪಸ್ಥಿತರಿದ್ದರು.