ಸುಳ್ಯ, ಸೆ 30 (DaijiworldNews/DB): ಸಾಮಾನ್ಯವಾಗಿ ಎಲೆ, ಕಡ್ಡಿ, ನಾರು ಅಥವಾ ಒಣ ವಸ್ತುಗಳಿಂದ ಕಾಗೆಗಳು ಗೂಡು ಕಟ್ಟುತ್ತವೆ. ಆದರೆ ಸುಳ್ಯದಲ್ಲೊಂದು ಕಾಗೆ ಬರೋಬ್ಬರಿ ಎರಡು ಕೆಜಿ ಕಬ್ಬಿಣದ ತಂತಿ ಬಳಸಿ ಬಳಸಿ ಗೂಡು ಕಟ್ಟಿದ ಅಪರೂಪದ ಪ್ರಸಂಗ ನಡೆದಿದೆ.
ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಕಾಗೆ ಕಬ್ಬಿಣದ ಗೂಡು ಕಟ್ಟಿ ವಾಸ ಮಾಡುತ್ತಿದೆ. ಕಾಗೆಯ ಎರಡು ಗೂಡುಗಳು ಕಬ್ಬಿಣದಿಂದಲೇ ಮಾಡಲ್ಪಟ್ಟಿರುವುದು ಇಲ್ಲಿ ಕಂಡು ಬಂದಿದ್ದು, ಸ್ಥಳೀಯರು ಅದರ ಫೋಟೋ ತೆಗೆದು ಶೇರ್ ಮಾಡಿದ್ದಾರೆ.
ಕಾಗೆಗಳು ಗೂಡಿನಲ್ಲಿ ವಾಸ್ತವ್ಯ ಇಲ್ಲದಿರುವಾಗ ಈ ಗೂಡು ಕಬ್ಬಿಣದ ತಂತಿಗಳಿಂದ ಮಾಡಿರುವುದು ಗೊತ್ತಾಗಿದೆ. ಸುಮಾರು ಎರಡು ಕೆಜಿಯಷ್ಟು ಕಬ್ಬಿಣದ ತಂತಿ ಬಳಸಲಾಗಿದೆ. ಪ್ರಸ್ತುತ ಕಾಗೆಗಳ ವಾಸ್ತವ್ಯ ಇಲ್ಲದ ಒಂದು ಗೂಡನ್ನು ತೆಗೆಯಲಾಗಿದ್ದು, ಇನ್ನೊಂದನ್ನು ಮರದಲ್ಲೇ ಉಳಿಸಲಾಗಿದೆ. ತೆಗೆದಿರುವ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.