ಉಡುಪಿ, ಫೆ 12 (MSP): ಕೋಟದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರನ್ನು ಪೊಲೀಸರು ಫೆ.11 ರ ಸೋಮವಾರ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇಬ್ಬರು ಪೊಲೀಸರ ಸಹಿತ ಎಂಟು ಮಂದಿಯನ್ನು ಪೊಲೀಸರ ವಿಶೇಷ ತಂಡ ಈಗಾಗಲೇ ಬಂಧಿಸಿದ್ದು , ಬಂಧಿತರ ಸಂಖ್ಯೆ 13ಕ್ಕೆ ಏರಿದೆ.
ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ ಯಾನೆ ಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ ಯಾನೆ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ ಬಂಧಿತರು. ಬಂಧಿತ ಆರೋಪಿಗಳಲ್ಲಿ ಅಭಿಷೇಕ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದು, ಈತ ಪೇಂಟಿಂಗ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದಾನೆ.
ಬಂಧಿತ ಇತರ ನಾಲ್ವರು ಆರೋಪಿಗಳಿಗೆ ಸಹಾಯ ಮಾಡಿದ್ದು ಆರೋಪಿ ಸಂತೋಷ್ ಕುಂದರ್ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದು, ಇನ್ನೋರ್ವ ಆರೋಪಿಗಳಾದ ಶಂಕರ ಮೊಗವೀರ ನಾಗರಾಜ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಆರೋಪಿ ಪ್ರಣವ್ ರಾವ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು ಆರೋಪಿತರಿಗೆ ಹಣ ಮತ್ತು ಮೊಬೈಲ್ ನೀಡಿ ಸಹಕರಿಸಿದ್ದಾನೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾನುವಾರವಷ್ಟೇ ಪೊಲೀಸರು ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಬಂಧಿಸಿದ್ದರು.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ತಂಡವೊಂದು ಜ.26ರಂದು ಕೊಲೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ, ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಐದು ಮಂದಿಯ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಒಟ್ಟು ಹದಿಮೂರಕ್ಕೇರಿದೆ.