ಉಡುಪಿ, ಸೆ.30 (DaijiworldNews/HR): ಭಾರತವನ್ನು ದುರ್ಬಲಗೊಳಿಸುವುದು ಪಿಎಫ್ಐನ ಉದ್ದೇಶವಾಗಿದ್ದು, ಭಾರತದ ಎಲ್ಲಾ ಸವಲತ್ತು ಪಡೆದು ದೇಶದ ವಿರುದ್ಧ ಇರುವವರ ಮಾನಸಿಕತೆ ಬದಲಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಿಎಫ್ಐ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಎನ್ಐಎ ಮೂರು ವರ್ಷ ಸಾಕ್ಷ್ಯ, ದಾಖಲೆ ಸಂಗ್ರಹಿಸಿದೆ ಎಂದರು.
ಎಸ್ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು,ಇದರ ಮೇಲೆ ಕ್ರಮ ಕೈಗೊಳ್ಳಬೇಕಾದ್ದು ಚುನಾವಣಾ ಆಯೋಗ . ಎಸ್ಡಿಪಿಐನಲ್ಲಿರುವ ಪಿಎಫ್ಐ ಕಾರ್ಯಕರ್ತರ ತನಿಖೆಯಾಗುತ್ತಿದೆ. ಆಸ್ತಿ ಮುಟ್ಟುಗೋಲು ಗೆ ಗೃಹಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ. ಬಾಂಬ್ ತಯಾರಿಕೆ, ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪಿಎಫ್ಐ ತರಬೇತಿ ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಮಾಡುತ್ತಿತ್ತು ಎಂದಿದ್ದಾರೆ.
ಆರ್ಎಸ್ಎಸ್ ಬ್ಯಾನ್ ಬೇಡಿಕೆ ವಿಚಾರದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ದೋಣಿಗೆ ನಾವಿಕನಿಲ್ಲದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದೆ. ಆರ್ಎಸ್ಎಸ್ ನಿಷೇಧ ಮಾಡಿದಾಗ ಕಾಂಗ್ರೆಸ್ಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಆರ್ಎಸ್ಎಸ್ ಬ್ಯಾನ್ ಮಾಡಿದ ಇಂದಿರಾಗಾಂಧಿಯನ್ನು ಜನ ಸೋಲಿಸಿದ್ದರು. ಆರ್ಎಸ್ಎಸ್ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಒಂದು ಬಾರಿ ಆರ್ಎಸ್ಎಸ್ ಶಾಖೆಗೆ ಭೇಟಿ ಕೊಡಿ. ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ. ಸಿದ್ದರಾಮಯ್ಯ ಪಿಎಫ್ಐ ಕಾರ್ಯಕರ್ತರ ಕೇಸು ವಾಪಸ್ ತೆಗೆದುಕೊಂಡಿದ್ದೇ ಕಾರಣ. ಕರ್ನಾಟಕವನ್ನು ಪಿಎಫ್ಐ ಫೈನಾನ್ಸಿಯಲ್ ಹಬ್ ಮಾಡಿದ್ದು ಸಿದ್ದರಾಮಯ್ಯ. ಆರ್ಎಸ್ಎಸ್ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಅರ್ಹತೆ ಕಾಂಗ್ರೆಸ್ ಗೆ ಇಲ್ಲ ಎಂದಿದ್ದಾರೆ.
ಭಾರತ ಜೋಡೋ ಕುರಿತು ಪ್ರತಿಕ್ರಿಯಿಸಿ, ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದರೋ ಅಲ್ಲಿ ಹೋಗಿ ಭಾರತ್ ಜೋಡೋ ಮಾಡಿ. ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ನೆಹರು ಹೇಳಿದ್ದರು. ಹಾಗಾಗಿ ಹಿಮಾಲಯವನ್ನು ಬಿಟ್ಟುಕೊಡಲಾಯಿತು. ತಿನ್ ಭಿಗಾದಲ್ಲಿ ಭಾರತ ಜೋಡೋ ಮಾಡಿ. ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡು ಮಾಡುವ ಅಗತ್ಯವಿಲ್ಲ. ಭಾರತ್ ಜೋಡೋ ಮಾಡ್ತಾ ಇದ್ದೀರಾ ? ಭಾರತ್ ತೋಡೋ ಮಾಡ್ತಾ ಇದ್ದೀರಾ? ಸ್ಪಷ್ಟಪಡಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.