ಮಂಗಳೂರು, ಸೆ 30 (DaijiworldNews/MS): ಪೋಸ್ಟ್ಮನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಗೆ ನ್ಯಾಯಾಲಯ ಜೈಲು ಶಿಕ್ಷೆ , ದಂಡ ವಿಧಿಸಿದೆ.
ಮಂಗಳೂರು ಮಠದ ಕಣಿ ರಸ್ತೆಯ ಮನೀಶ್ ಶಿಕ್ಷೆಗೊಳಗಾದ ಆರೋಪಿ. ಈತನಿಗೆ 2020ರ ಜೂ.16ರಂದು ಬೆಳಗ್ಗೆ ಅಶೋಕ ನಗರ ಅಂಚೆ ಕಚೇರಿಯ ಪೋಸ್ಟ್ಮನ್ ದಿನೇಶ್ ಎಂಬವರು ರಿಜಿಸ್ಟರ್ ಪೋಸ್ಟ್ ನೀಡಲು ಹೋಗಿದ್ದ ಸಂದರ್ಭ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದ. ಅಲ್ಲದೆ ಕಾಗದ ಪತ್ರವನ್ನು ಹರಿದು ಹಾಕಿ ದಿನೇಶ್ ಅವರನ್ನು ದೂಡಿ ಹಾಕಿ ಅವರ ಬೈಕ್ನ್ನು ಜಖಂಗೊಳಿಸಿ 13,500 ರೂ. ನಷ್ಟವನ್ನುಂಟು ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ.
ಬರ್ಕೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಹಾರುನ್ ಅಖ್ತರ್ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ 6ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ ಎಚ್.ಎಸ್. ಅವರು ಸೆ.17ರಂದು ಮನೀಶ್ ತಪ್ಪಿತಸ್ಥನೆಂದು ನಿರ್ಣಯಿಸಿ ಭಾ.ದಂ.ಸಂ ಕಲಂ 427ರಡಿಯಲ್ಲಿ ಅಪರಾಧಕ್ಕಾಗಿ 2,500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನಗಳ ಸಾಮಾನ್ಯ ಸೆರೆವಾಸ ಮತ್ತು ಭಾ.ದಂ.ಸಂ ಕಲಂ 332ರಡಿ ಅಪರಾಧಕ್ಕೆ 10 ತಿಂಗಳ ಸಾದಾ ಸಜೆ, ಭಾದಂಸಂ ಕಲಂ 353ರಡಿ ಅಪರಾಧಕ್ಕೆ 5 ತಿಂಗಳ ಸಾದಾ ಸಜೆ, ಭಾ.ದಂ.ಸಂ ಕಲಂ 324ರಡಿಯ ಅಪರಾಧಕ್ಕೆ 6 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ