ಕುಂಬಳೆ, ಫೆ 12 (MSP): ಕೆಲವು ದಿನಗಳ ಹಿಂದೆ ತನ್ನ ಮನೆಗೆ ನಕ್ಸಲರು ಬಂದಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದ ಏತಡ್ಕ ವಳಕ್ಕುಂಜ ನಿವಾಸಿ ರಬ್ಬರ್ ಕೃಷಿಕ ಜೈಸನ್ ಜೋಸೆಫ್ (47) ಫೆ. 9ರ ಶನಿವಾರ ಮನೆಯೊಳಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿದ್ದ ಅವರು ಪಡೆದ ಸಾಲ ಹಿಂತಿರುಗುಇಸಲಾಗದೆ ಮನನೊಂದು ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ.
ಕೇರಳದ ಕಣ್ಣೂರಿನವರಾಗಿದ್ದ ಅವರು 10 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದರು. ಹೊಸಮನೆ ಕಟ್ಟಿಸಲು ಬ್ಯಾಂಕಿನಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ರಬ್ಬರ್ ಬೆಲೆ ಕುಸಿತದಿಂದ ಸಾಲ ಮರುಪಾತಿ ಸಾಧ್ಯವಾಗಿರಲಿಲ್ಲ.
ಜ. 15ರಂದು ಅವರು ತನ್ನ ಮನೆಗೆ ಶಸ್ತ್ರಧಾರಿ ನಕ್ಸಲರು ಆಗಮಿಸಿ ಅಕ್ಕಿ, ತರಕಾರಿ ಇತ್ಯಾದಿಗಳಿಗೆ ಬೇಡಿಕೆ ಮಂಡಿಸಿದ್ದರು ಎಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಈ ಪ್ರದೇಶಕ್ಕೆ ರಬ್ಬರ್ ಟ್ಯಾಪಿಂಗಿಗೆ ಬೆರೆ ಕಾರ್ಮಿಕರು ಬಾರದಂತೆ ಹೆಣೆದ ಕಟ್ಟುಕಥೆ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಅವರು ಈ ಘಟನೆಯಿಂದಕೂ ಅವರು ಹೈರಾಣಾಗಿದ್ದರೆಂದು ತಿಳಿದುಬಂದಿದೆ. ಮೃತರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ.