ಕಾಸರಗೋಡು, ಸೆ 29 (DaijiworldNews/MS): ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಬುಧವಾರ ಸಂಜೆ ಪಯಸ್ವಿನಿ ಹೊಳೆಯ ಬೇಡಡ್ಕ ಕರಿಚ್ಚೇರಿ ಯಲ್ಲಿ ನಡೆದಿದೆ. ನೀರುಪಾಲಾಗಿದ್ದ ಇಬ್ಬರ ಮೃತದೇಹ ರಾತ್ರಿ ಪತ್ತೆಯಾಗಿದೆ.
ಕೊಲ್ಲಂ ನ ವಿಜಿತ್ (23) ಮತ್ತು ತಿರುವನಂತಪುರ ದ ರಂಜು (24) ಮೃತಪಟ್ಟವರು.
ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೇಡಡ್ಕ ಮುನಂಬ್ ತೂಗು ಸೇತುವೆ ಬಳಿ ಹೊಳೆಗೆ ಸ್ನಾನಕ್ಕೆಂದು ಸ್ನೇಹಿತರ ಜೊತೆ ಇಳಿದಿದ್ದು , ಈ ಸಂದರ್ಭದಲ್ಲಿ ಇಬ್ಬರು ಮುಳುಗಿದ್ದರು ಬಳಿಕ ಅಗ್ನಿಶಾಮಕ ದಳದ ಸಿಬಂದಿಗಳು , ಪೊಲೀಸರು ಹಾಗೂ ಪರಿಸರವಾಸಿಗಳು ಶೋಧ ನಡೆಸಿದ್ದು ,ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರ ಮೃತದೇಹ ಪತ್ತೆಯಾಗಿದೆ.
ವಿಜಿತ್ ನ ಮೃತದೇಹ ತೂಗು ಸೇತುವೆ ಬಳಿ ಹಾಗೂ ರಂಜುವಿನ ಮೃತದೇಹ ಘಟನೆ ನಡೆದ ಅಲ್ಪ ದೂರ ಪತ್ತೆಯಾಗಿದೆ. ಬೇಡಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.
ಚೆನ್ನೈ ನ ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದ ಇಬ್ಬರೂ ಇದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮುನಂಬ್ ನ ಸಹದ್ಯೋಗಿ ವಿಷ್ಣು ಅವರ ಮನೆಗೆ ಬಂದಿದ್ದರು .
ಸೆ. 25 ರಂದು ಸ್ನೇಹಿತರ ಜೊತೆ ಗೋವಾಕ್ಕೆ ತೆರಳಿ ಬುಧವಾರ ರಾಣಿಪುರಕ್ಕೆ ಆಗಮಿಸಿದ್ದು , ಸಂಜೆ ಮೂರು ಗಂಟೆಗೆ ಮುನಂಬ್ ನಲ್ಲಿರುವ ವಿಷ್ಣು ವಿನ ಮನೆಗೆ ಬಂದಿದ್ದರು. ರಾತ್ರಿ ಇವರು ರೈಲಿನಲ್ಲಿ ಊರಿಗೆ ಮರಳುವವರಿದ್ದರು. ಸಂಜೆ ನಾಲ್ಕು ಗಂಟೆಗೆ ಇವರು ಮುನಂಬ್ ನಲ್ಲಿರುವ ತೂಗು ಸೇತುವೆ ಬಳಿಗೆ ತಲಪಿದ್ದರು . ಬಳಿಕ ವಿಜಿತ್ , ರಂಜು ಸೇರಿದಂತೆ ನಾಲ್ವರು ಹೊಳೆಗೆ ಇಳಿದಿದ್ದರು . ಈ ಸಂದರ್ಭದಲ್ಲಿ ಇಬ್ಬರು ನೀರುಪಾಲಾಗಿದ್ದರು. ದುರಂತದ ಸುದ್ದಿ ತಿಳಿದು ಸಂಬಂಧಿಕರು ಕಾಸರಗೋಡಿಗೆ ಆಗಮಿಸಿದ್ದು , ಮಧ್ಯಾಹ್ನದ ವೇಳೆಗೆ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ