ಮಂಗಳೂರು, ಸೆ 28 (DaijiworldNews/DB): ಮಂಗಳೂರು, ಉಡುಪಿ ಮತ್ತು ಮಣಿಪಾಲದಲ್ಲಿ ಕಾರ್ಯಾಚರಿಸುವ ಎಲ್ಲಾ ಬಸ್ಗಳಲ್ಲಿ ಮುಂದಿನ ಏಳು ದಿನಗಳೊಳಗಾಗಿ ಕಡ್ಡಾಯವಾಗಿ ಕನ್ನಡದಲ್ಲಿ ಸ್ಥಳಗಳ ನಾಮಫಲಕ ಅಳವಡಿಕೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಸೂಚಿಸಿದೆ.
ಇಲಾಖೆಯಲ್ಲಿ ಇತ್ತೀಚೆಗೆ ನಡೆದ ಜನಸ್ಪಂದನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ಇಲಾಖೆ ಸೂಚನೆ ಹೊರಡಿಸಿದೆ. ಎಲ್ಲಾ ಬಸ್ಗಳ ಮಾಲಕರು ಸ್ಥಳಗಳ ಹೆಸರುಗಳು ಮತ್ತು ಬಸ್ ಸಂಖ್ಯೆಯನ್ನೊಳಗೊಂಡ ನಾಮಫಕವನ್ನು ಕನ್ನಡದಲ್ಲೇ ಬರೆದು ಅಳವಡಿಸಬೇಕು. ಪ್ರಸ್ತುತ ಇಂಗ್ಲಿಷ್ ನಾಮಫಲಕ ಇದ್ದರೂ, ಅದರೊಂದಿಗೆ ಕನ್ನಡ ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಮುಂದಿನ ಏಳು ದಿನಗಳೊಳಗೆ ಕನ್ನಡ ನಾಮಫಲಕ ಕಡ್ಡಾಯ. ನಿಗದಿತ ದಿನಾಂಕದ ಬಳಿಕ ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದರೆ ಅಂತಹ ಬಸ್ ಮಾಲಕರ ವಿರುದ್ದ ಕ್ರಮ ಕೈಗೊಳ್ಳಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.