ಮಂಗಳೂರು, ಸೆ 28 (DaijiworldNews/DB): ನಗರದ ಬಾವುಟಗುಡ್ಡೆ ಲೇಡೀಸ್ ಕ್ಲಬ್ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿ ವೇಳೆ ರಸ್ತೆಯ ಒಂದು ಬದಿ ಮಂಗಳವಾರ ಬೆಳಗ್ಗೆ ನಿರ್ಮಿಸಲಾಗಿದ್ದ ಪಾರ್ಕಿಂಗ್ ಸ್ಲಾಟ್ನ್ನು ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ತೆರವುಗೊಳಿಸಲಾಯಿತು.
ಲೇಡೀಸ್ ಕ್ಲಬ್ ಬಳಿ ಹಂಪನಕಟ್ಟೆ ತಿರುವಿಗೆ ಫ್ರೀ ರೈಟ್ ಟರ್ನ್ ಮಾಡಲಾಗಿದ್ದು, ಅಲ್ಲೇ ಪಕ್ಕದಲ್ಲಿ ಈ ಸ್ಲಾಟ್ ನಿರ್ಮಾಣಗೊಂಡಿತ್ತು. ಆದರೆ ಇದು ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿ ಪರಿಣಮಿಸುತ್ತದೆ ಎಂದು ಸಾರ್ವಜನಿಕರು ದೂರಿದರು. ಈ ಕಾರಣಕ್ಕಾಗಿ ಬೆಳಗ್ಗೆ ನಿರ್ಮಿಸಲಾಗಿದ್ದ ಪಾರ್ಕಿಂಗ್ ಸ್ಲಾಟ್ನ್ನು ಸಂಜೆ ವೇಳೆಗೆ ಸ್ಮಾರ್ಟ್ಸಿಟಿಯಿಂದಲೇ ತೆರವು ಮಾಡಲಾಯಿತು.
ಈ ಹಿಂದೆ ಈ ಜಾಗದ ಪಕ್ಕದಲ್ಲೇ ಪಾರ್ಕಿಂಗ್ ಸ್ಲಾಟ್ ನಿರ್ಮಾಣಗೊಂಡಿದ್ದು, ಆಗಲೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತೆರವು ಮಾಡಲಾಗಿತ್ತು.