ಉಡುಪಿ, ಸೆ 28 (DaijiworldNews/DB): ಬೈಕ್, ಚಪ್ಪಲಿಯನ್ನು ಮಲ್ಪೆ ಪಡುಕೆರೆ ಸೇತುವೆ ಬಳಿ ಇರಿಸಿ ನೀರಿಗೆ ಬಿದ್ದು ನಾಪತ್ತೆಯಾದ ರೀತಿಯಲ್ಲಿ ನಾಟಕವಾಡಿದ ದಾವಣಗೆರೆ ಮೂಲದ ಯುವಕನೋರ್ವ ಆತನ ತವರು ಜಿಲ್ಲೆ ದಾವಣಗೆರೆಯಲ್ಲೇ ಸೋಮವಾರ ಪತ್ತೆಯಾಗಿದ್ದಾನೆ.
ಶಿವಪ್ಪ ನಾಯ್ಕ ನಾಪತ್ತೆ ನಾಟಕವಾಡಿ ಸಿಕ್ಕಿ ಬಿದ್ದಾತ. ಪತ್ನಿಯನ್ನು ಬಿಟ್ಟು, ಅನ್ಯ ಯುವತಿಯೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಆತ ನೀರಿನಲ್ಲಿ ಮುಳುಗಿ ನಾಪತ್ತೆಯಾದ ನಾಟಕವಾಡಿದ್ದ. ಪೊಲೀಸರ ಹಾದಿ ತಪ್ಪಿಸುವ ಉದ್ದೇಶ ಅವನದಾಗಿತ್ತು. ಆದರೆ ಆತನ ನಾಟಕದ ನೈಜತೆ ಇದೀಗ ಬಯಲಾಗಿದ್ದು, ದಾವಣಗೆರೆಯಲ್ಲಿ ಸೋಮವಾರ ಪತ್ತೆಯಾಗಿದ್ದಾನೆ. ಮಲ್ಪೆ ಪೊಲೀಸರು ಆತನನ್ನು ಠಾಣೆಗೆ ಕರೆ ತಂದಿದ್ದಾರೆ.
ಶಿವಪ್ಪ ನಾಯ್ಕ ಆರು ತಿಂಗಳ ಹಿಂದೆ ದಾವಣಗೆರೆ ಉತ್ಕಟಿ ತಾಂಡ ಮೂಲದ ಆಶಾ ಎಂಬಾಕೆಯನ್ನು ಪ್ರೀತಿಸಿ ವರಿಸಿದ್ದ. ಬಳಿಕ ಮಲ್ಪೆ ಕೊಳದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೀನುಗಾರಿಕೆ ಬಂದರಿನಲ್ಲಿ ಮೀನು ಹೊರುವ ಕೆಲಸ ನಿರ್ವಹಿಸುತ್ತಿದ್ದ. ಈ ನಡುವೆ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ಹರಪ್ಪನಹಳ್ಳಿಯ ಕಮಲಿ ಎಂಬಾಕೆಯೊಂದಿಗೆ ಆತನ ಸಂಪರ್ಕ ಹೊಂದಿದ್ದ. ಬಳಿಕ ಆಕೆಯನ್ನು ಪಡೆಯುವ ಉದ್ದೇಶದಿಂದ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಸೆ. 23ರಂದು ಆತನ ಬೈಕ್ ಮತ್ತು ಚಪ್ಪಲಿ ಪಡುಕೆರೆ ಸೇತುವೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಆತ ಸೇತುವೆಯಿಂದ ನದಿಗೆ ಬಿದ್ದಿದ್ದಾನೆಂದು ಶಂಕಿಸಿ ನಾಪತ್ತೆ ದೂರು ದಾಖಲಿಸಲಾಗಿತ್ತು. ಬಳಿಕ ಪೊಲೀಸರ ಮನವಿ ಮೇರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಶಿವಪ್ಪ ಪತ್ತೆಯಾಗಿರಲಿಲ್ಲ.
ಬಳಿಕ ಆತನ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಬ್ಯಾಂಕಿನಿಂದ 24 ಸಾವಿರ ರೂ. ಹಣ ಡ್ರಾ ಮಾಡಿರುವ ಮೆಸೇಜ್ ಬಂದಿರುವುದು ಗೊತ್ತಾಯಿತು. ಇದರಿಂದಾಗಿ ಆತ ಜೀವಂತ ಇರುವುದನ್ನು ಕಂಡುಕೊಂಡ ಪೊಲೀಸರು, ಸಂಬಂಧಿಕರ ಮೂಲಕ ಮಾಹಿತಿ ಪಡೆದುಕೊಂಡು ಆತನನ್ನು ಮಲ್ಪೆಗೆ ಕರೆಸಿಕೊಂಡಿದ್ದಾರೆ.
ವಿಚಾರಣೆ ವೇಳೆ ತನ್ನ ನಾಟಕವನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಬೈಕ್ ಬ್ರೇಕ್ ಒತ್ತಿ, ಎಕ್ಸಲೇಟರ್ ಜಾಸ್ತಿ ಮಾಡಿದಾಗ ಸೇತುವೆ ತಡೆಗೋಡೆಗೆ ತಾಗಿ ಆತ ನದಿಗೆ ಎಸೆಯಲ್ಪಟ್ಟಿದ್ದಾನೆ ಎಂದು ಬಿಂಬಿಸುವುದು ಆತನ ಉದ್ದೇಶವಾಗಿದೆ. ಅಲ್ಲದೆ ಕೋಳಿ ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿದ್ದ. ಇದು ಆತನಿಗೆ ಅಪಘಾತದಲ್ಲಿ ಗಾಯವಾಗಿತ್ತು ಎಂದು ಬಿಂಬಿಸುವ ನಾಟಕವಾಗಿತ್ತು. ಒಂದು ಚಪ್ಪಲಿ ಮತ್ತು ಮೊಬೈಲ್ನ್ನು ಅಲ್ಲೇ ಬಿಟ್ಟ ಆತನ ಉಡುಪಿ ಲಾಡ್ಜ್ನಲ್ಲಿ ಉಳಿದು ಮರುದಿನ ಸಂಬಂಧಿಕರ ಮನೆಗೆ ಹೋಗಿದ್ದಾನೆ. ಪತ್ನಿ ಬಿಟ್ಟು ಅನ್ಯ ಯುವತಿಯೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಪತ್ನಿಯೊಂದಿಗೆ ಸಂಸಾರ ಮಾಡುವಂತೆ ಬುದ್ದಿವಾದ ಹೇಳಿ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ.