ಉಡುಪಿ, ಸೆ 28 (DaijiworldNews/DB): ಉಡುಪಿ, ಕಾಪು, ಕುಂದಾಪುರ ವ್ಯಾಪ್ತಿಯಲ್ಲಿ ಅಕ್ಟೋಬರ್ 7ರಿಂದ 14 ರೊಳಗೆ ಸಂಸದೆ ಶೋಭಾ ಕರಂದ್ಲಾಜೆ ಕಾಣಿಸಿಕೊಂಡರೆ ಅವರೊಂದಿಗೆ ಸೆಲ್ಫಿ ತೆಗೆದು ಕಳುಹಿಸಿಕೊಡಿ. ವಿಜೇತರಾದ ಐವರಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಘೋಷಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಉಡುಪಿ ಪ್ರಮುಖ ರಸ್ತೆಗಳನ್ನು ದುರಸ್ತಿಗೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೇಂದ್ರ, ರಾಜ್ಯ ಸರಕಾರ ಹಾಗೂ ಉಡುಪಿ ನಗರಸಭೆಯ ವಿರುದ್ಧ ಕಲ್ಮಾಡಿ ಜಂಕ್ಷನ್ನಿಂದ ಕರಾವಳಿ ಬೈಪಾಸ್ವರೆಗೆ ಮಂಗಳವಾರ ನಡೆದ ವಿನೂತನ ಪಾದಯಾತ್ರೆಯ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದಸರಾ ಬಳಿಕ ಅವರು ಕ್ಷೇತ್ರದಲ್ಲಿ ಕಂಡು ಬಂದಲ್ಲಿ ಸೆಲ್ಫೀ ತೆಗೆದು ಕಳುಹಿಸಿ. ಅಕ್ಟೋಬರ್ 14ರ ಬಳಿಕವೂ ಕ್ಷೇತ್ರದಲ್ಲಿ ಸಂಸದರು ಕಾಣಿಸಿಕೊಳ್ಳದಿದ್ದಲ್ಲಿ ಎಲ್ಲಾ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸಲಾಗುವುದು ಎಂದರು.
ಬಿಜೆಪಿಗೆ ಶೋಭಕ್ಕನ ಮೇಲೆ ಕಾಳಜಿ ಇಲ್ಲದಿದ್ದರೂ ಕಾಂಗ್ರೆಸ್ಗೆ ಗೌರವವಿದೆ. ಹೀಗಗಿ ಅವರನ್ನು ಹುಡುಕಿಕೊಡಿ ಎಂದು ನಾಪತ್ತೆ ದೂರು ದಾಖಲು ಮಾಡುತ್ತೇವೆ. ಅಲ್ಲದೆ ಸಂಸದೆಯನ್ನು ಹುಡುಕಿಕೊಡಿ ಎಂದು ಕರಾವಳಿ ಫ್ಲೈ ಓವರ್ಗಳ ಮೇಲೆಯೂ ಪೋಸ್ಟರ್ ಅಂಟಿಸುತ್ತೇವೆ ಎಂದವರು ತಿಳಿಸಿದರು.
ಶೋಭಾ ಕರಂದ್ಲಾಜೆ ಮತ್ತು ನಳಿನ್ಕುಮಾರ್ ಅವರು ಸಂಸದರಾಗಿರುವ ತನಕ ಉಡುಪಿ, ದಕ್ಷಿಣ ಕನ್ನಡ ಉದ್ದಾರ ಆಗುವುದು ದೂರದ ಮಾತು. ಬಿಜೆಪಿ ಸರ್ಕಾರ ನಿದ್ದೆಯ ಮಂಪರಿನಲ್ಲಿದ್ದು, ಶಾಸಕ ರಘುಪತಿ ಭಟ್ ಮಣಿಪಾಲದಲ್ಲಿ ರಾತ್ರಿ ಹಣ ಎಣಿಸುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಶೋಭಾ ಕರಂದ್ಲಾಜೆಯವರಿಗೆ ಗುತ್ತಿಗೆದಾರರು ಶೇ.40 ಕಮಿಷನ್ ನೀಡದಿರುವುದೇ ರಸ್ತೆ ದುರಸ್ತಿ ವಿಳಂಬವಾಗುತ್ತಿರುವುದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಅಮೃತ್ ಶೆಣೈ, ಬಿ. ನರಸಿಂಹ ಮೂರ್ತಿ, ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ಆನಂದಿ, ಅಣ್ಣಯ್ಯ ಶೇರಿಗಾರ್, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಫಾ. ವಿಲಿಯಂ ಮಾರ್ಟಿಸ್, ಗಣೇಶ್ ನೆರ್ಗಿ, ವೆರೆನಿಕಾ ಕರ್ನೇಲಿಯೋ, ಡಾ. ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ದಿನೇಶ್ ಪುತ್ರನ್, ಬಿ. ಕುಶಲ ಶೆಟ್ಟಿ, ಸುರಯ್ಯ ಅಂಜಮ್, ಲೂವಿಸ್ ಲೋಬೊ, ಸುಂದರ್ ಮಾಸ್ಟರ್, ನಾರಾಯಣ ಕುಂದರ್ ಉಪಸ್ಥಿತರಿದ್ದರು.