ಮಂಗಳೂರು, ಸೆ 28 (DaijiworldNews/MS): ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಕರಾವಳಿ ಉತ್ಸವ ಹಮ್ಮಿಕೊಳ್ಳುವ ಬಗ್ಗೆ ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.
ಅವರು ಸೆ.27ರ ಮಂಗಳವಾರ ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ತಣ್ಣೀರು ಬಾವಿ ಬ್ಲೂ ಫ್ಲ್ಯಾಗ್ ಗೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫಲ ಅವಕಾಶಗಳಿವೆ. ಅದರಲ್ಲಿ ಬೀಚ್ ಪ್ರವಾಸೋದ್ಯಮ ಪ್ರಮುಖವಾದದು, ಟೆಂಪಲ್ ಟೂರಿಸಂ, ಪಶ್ಚಿಮ ಘಟ್ಟ, ನದಿಗಳು, ಸಮುದ್ರ ಅರಣ್ಯ ಸೇರಿದಂತೆ ಇರುವ ಅವಕಾಶಗಳನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ವಿಸ್ತರಿಸಬಹುದಾಗಿದೆ, ಈ ಹಿನ್ನೆಲೆಯಲ್ಲಿ ಸಸಿಹಿತ್ಲು, ಸುರತ್ಕಲ್, ಪಣಂಬೂರು, ಸೋಮೇಶ್ವರ, ಉಲ್ಲಾಳ ದ ಕಡಲ ಕಿನಾರೆಗಳನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಪಣಂಬೂರು ಬೀಚನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯಲಾಗಿದೆ. ಪಣಂಬೂರನ್ನು ಪ್ರಾಯೋಗಿಕವಾಗಿ ಮಾಡಿ, ಉಳಿದ ಬೀಚ್ಗಳ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಸಸಿಹಿತ್ಲುವಿನಲ್ಲಿ 29 ಎಕರೆ ಡೀಮ್ಡ್ ಫಾರೆಸ್ಟ್ ಜಾಗದಲ್ಲಿ ಜಂಗಲ್ ಲಾಡ್ಜ್ ಸಹಿತ ಇಕೋ ಟೂರಿಸಂ ಯೋಜನೆ ಟೆಂಡರ್ ಹಂತದಲ್ಲಿದೆ. ಸ್ಥಳೀಯ ಭಾವನೆಗಳಿಗೆ ದಕ್ಕೆಯಾಗದಂತೆ, ಸುರಕ್ಷತೆಗೆ ಒತ್ತು ನೀಡಿ ರಾತ್ರಿ ಪ್ರವಾಸೋದ್ಯಮವನ್ನೂ ಆರಂಭಿಸಲು ಯೋಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಜಿಲ್ಲೆಯನ್ನು ಟೂರಿಸಂ ಹಬ್ ಆಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಪೂರಕವಾಗಿ ಬ್ಲೂ ಫ್ಲ್ಯಾಗ್ ಸಹಿತ ವಿವಿಧ ಬೀಚ್, ಕುದ್ರುಗಳನು ಅಭಿವೃದ್ಧಿ ಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.ಜಿಲ್ಲೆಯ ಎರಡು ಬೀಚ್ಗಳನ್ನು ಬ್ಲೂ ಫ್ಲ್ಯಾಗ್ಗೆ ಆಯ್ಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಇಡ್ಯಾ ಬೀಚನ್ನೂ ಬ್ಲೂ ಫ್ಲ್ಯಾಗ್ ಗಾಗಿ ಅಭಿವೃದ್ಧಿ ಪಡಿಸಲು ಕೇಂದ್ರಕ್ಕೆ ಮತ್ತೆ ಪತ್ರ ಬರೆಯಲಾಗುವುದು ಎಂದರು.
ತಣ್ಣೀರು ಬಾವಿ ಬೀಚ್ ಗೆ ಬ್ಲೂ ಫ್ಲ್ಯಾಗ್ ಮಾನ್ಯತೆಗಾಗಿ 7.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಶೌಚಗೃಹ, ಚೇಂಜಿಂಗ್ ರೂಮ್, ಸೆಕ್ಯುರಿಟಿ ವ್ಯವಸ್ಥೆ ಸಹಿತ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಬಳಿಕ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಇದೇ ವೇಳೆ ಸ್ಮಾರ್ಟ್ ಸಿಟಿಯಿಂದಲೂ ಬೀಚ್ನಲ್ಲಿ 9.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು, ಜೆಟ್ಟಿ ನಿರ್ಮಾಣ, ಸಣ್ಣ ಕ್ರೀಡಾಂಗಣ, ಪಾರ್ಕಿಂಗ್ ವ್ಯವಸ್ಥೆಗಳು ಇದರಲ್ಲಿ ಸೇರಿವೆ. ರಸ್ತೆಯಿಂದ ಬೀಚ್ಗೆ ಬರುವಲ್ಲಿ ನೀರಾಟಗಳಿಗೆ ಸಂಬಂಧಿಸಿದ ಕಿಯಾಸ್ಕ್, ಅಂಗಡಿಗಳು ನಿರ್ಮಾಣವಾಗಲಿದೆ. ಇದರಿಂದ ಉದ್ಯೋಗಾವಕಾಶಗಳು ಸಿಗುವ ಜತಗೆ ಆದಾಯವೂ ಬರಲಿದೆ. ಪಕ್ಕದ ನಾಯರ್ ಕುದ್ರುವನ್ನು 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಆ್ಯಂಪಿಥಿಯೇಟರ್, ಗೋ ಕಾರ್ಟ್ ರೇಸಿಂಗ್, ಡರ್ಟ್ ಟ್ರ್ಯಾಕ್ ಮೊದಲಾದವುಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ದಿನವನ್ನು ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್ ವೇದಿಕೆಯಲ್ಲಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವೈ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಸ್ವಾಗತಿಸಿದರು. ಉಪನ್ಯಾಸಕ ಉಮೇಶ್ ಕೆ.ಆರ್. ವಂದಿಸಿದರು.