ಬಂಟ್ವಾಳ, ಸೆ 27 (DaijiworldNews/SM): ಇಲ್ಲಿನ ಎಆರ್ಟಿಒ ಕಚೇರಿಯಲ್ಲಿ ಆಟೋ ರಿಕ್ಷಾಗಳ ಫಿಟ್ನೆಸ್ ಸರ್ಟಿಫಿಕೇಟ್(ಎಫ್ಸಿ) ಮಾಡುವ ಸಂದರ್ಭದಲ್ಲಿ 600 ರೂ.ಗಳ ಸ್ಟಿಕ್ಕರ್ ಕಡ್ಡಾಯ ಮಾಡಿರುವುದರಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದ್ದು, ಹೀಗಾಗಿ ಸ್ಟಿಕ್ಕರ್ ಕಡ್ಡಾಯದಿಂದ ವಿನಾಯಿತಿ ನೀಡುವಂತೆ ಆಟೋ ಚಾಲಕರು ಮಂಗಳವಾರ ಬಿ.ಸಿ.ರೋಡಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಸಾರಿಗೆ ಸಚಿವ ಶ್ರೀರಾಮುಲು ಅವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ವಿನಾಯಿತಿಯ ಕುರಿತು ತಿಳಿಸಿದ್ದಾರೆ ಎಂದರು. ಬಳಿಕ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ಆಟೋ ಚಾಲಕರಿಗೆ ಹೊರೆಯಾಗದಂತೆ ಎಫ್ಸಿ ಮಾಡಿಸಿಕೊಡಲು ಸೂಚನೆ ನೀಡಿದರು.
ಬಂಟ್ವಾಳದಲ್ಲಿ ಮಾತ್ರ ಈ ರೀತಿ ಶುಲ್ಕ ಪಡೆಯುತ್ತಿದ್ದು, ಉಡುಪಿ, ಮಂಗಳೂರು, ಪುತ್ತೂರು ಆರ್ಟಿಒ ಕಚೇರಿಗಳಲ್ಲಿ ವಿಚಾರಿಸಿದಾಗ ಆ ರೀತಿ ಕಡ್ಡಾಯವಾಗಿ ಸ್ಟಿಕ್ಕರ್ ಪಡೆಯಬೇಕಿಲ್ಲ ಎಂಬ ಉತ್ತರ ನೀಡುತ್ತಾರೆ. ಆದರೆ ಬಂಟ್ವಾಳ ಎಆರ್ಟಿಒ ಅವರಲ್ಲಿ ವಿಚಾರಿಸಿದರೆ ನಮಗೆ ಇಲಾಖೆಯ ಕಮೀಷನರ್ ಅವರಿಂದ ಆದೇಶ ಬಂದಿದೆ ಎನ್ನುತ್ತಾರೆ ಎಂದು ಸಚಿವರಿಗೆ ವಿವರಿಸಿದರು.