ಮಂಗಳೂರು, ಫೆ 11(MSP): ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ದೇಶದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿದೆ. ರಾಜ್ಯದಲ್ಲೂ ಮುಂಬರುವ ಲೋಕ ಚುನಾವಣೆಗೆ ಬಿಜೆಪಿ ಹುಬ್ಬಳ್ಳಿಯ ಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ರಣಕಹಳೆ ಮೊಳಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಹೇಳಲಾಗುವ ಹುಬ್ಬಳ್ಳಿಗೆ ಫೆ.10 ರ ಭಾನುವಾರ ಆಗಮಿಸಿ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿರುವ ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಆಗಮನದಿಂದ ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದೆ.
ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಾಳಯದಲ್ಲಿ ಮುಂಬರುವ ಚುನಾವಣೆ ಎದುರಿಸಲು ಬಿರುಸಿನ ಚಟುವಟಿಕೆ ಆರಂಭವಾಗಿದೆ. ಈ ನಡುವೆ ಮಂಗಳೂರಿನಲ್ಲಿ ಮೋದಿ ಅವರ ಆರೋಗ್ಯ, ಕ್ಷೇಮಾಭಿವೃದ್ಧಿಗಾಗಿ ದೇವರ ಮೊರೆ ಹೋಗಲಾಗಿದೆ. ಮಂಗಳೂರಿನ ಹಿಂದೂ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಫೆ.11 ರ ಸೋಮವಾರ ನಗರದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮೋದಿ ಅವರಿಗಾಗಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆರೋಗ್ಯ, ಕ್ಷೇಮಾಭಿವೃದ್ಧಿ ಹಾಗೂ ಮುಂದಿನ ರಾಜಕೀಯ ಜೀವನವು ಸುಗಮವಾಗಿ ಸಾಗಲಿ ಎಂಬ ಬೇಡಿಕೆಯನ್ನಿಟ್ಟು, ಇಂದು ಬೆಳಗ್ಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಏಕ ರುದ್ರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ, ಕ್ಷೇಮಾಭಿವೃದ್ಧಿ ಹಾಗೂ ಮುಂದಿನ ರಾಜಕೀಯ ಜೀವನವು ಸುಗಮವಾಗಿ ಸಾಗಲಿ , ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಿಂದೂ ಸಂರಕ್ಷಣಾ ಸಮಿತಿ ಪ್ರಾರ್ಥನೆ ಸಲ್ಲಿಸಿದರು.