ಮಂಗಳೂರು, ಸೆ 26 (DaijiworldNews/DB): ಸರ್ಕಾರದ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡು ಬಂದಲ್ಲಿ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರು ನೇರವಾಗಿ ಲೋಕಾಯುಕ್ತರಿಗೆ ದೂರು ಸಲ್ಲಿಸುವಂತೆ ಕಳೆದ ಶುಕ್ರವಾರ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಂಗಳೂರು ಹಾಗೂ ಉಡುಪಿ ವಿಭಾಗದ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಜನತೆಗೆ ಕರೆ ನೀಡಿದ್ದಾರೆ.
ನಗರದ ಉರ್ವಾಸ್ಟೋರ್ ಬಳಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೆಪ್ಟಂಬರ್ 26ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅಥವಾ ಗಳಿಕೆಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದರೆ ಅವರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ಕರ್ನಾಟಕ ಲೋಕಾಯುಕ್ತವನ್ನು 2022ರ ಸೆಪ್ಟಂಬರ್ 9ರಿಂದ ಮತ್ತಷ್ಟು ಬಲಿಗೊಳಿಸುವುದರೊಂದಿಗೆ, ಪೊಲೀಸ್ ಠಾಣಾ ಅಧಿಕಾರದ ಜೊತೆಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹೆಚ್ಚಿನ ಕೆಲಸ ಮಾಡುವ ಅಧಿಕಾರ ನೀಡಿದೆ. ಯಾರಾದರೂ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ, ಅಧಿಕಾರ ದುರ್ಬಳಕೆ ಅಥವಾ ಕೆಲಸ ಮಾಡಿಕೊಡಲು ಹಣ ಕೇಳುತ್ತಿರುವ ಬಗ್ಗೆ ದೂರು ಬಂದರೆ ಅವರು ಆ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ಅವರ ವಿರುದ್ಧ ತನಿಖೆ ಆರಂಭಿಸಿಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಲೋಕಾಯುಕ್ತ ಮಂಗಳೂರು ವಿಭಾಗ ಎಂದರೆ ಮಂಗಳೂರು ಹಾಗೂ ಉಡುಪಿ ಜಿಲ್ಲೆ ಎರಡು ಜೊತೆಗೂಡುತ್ತದೆ. ಈಗಾಗಲೇ ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಯುಕ್ತಕ್ಕೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ವಿರುದ್ಧ ತನಿಖೆ ಕೈಗೆತ್ತಿಕೊಳ್ಳಲಾಗುತ್ತದೆ. ಈಗಾಗಲೇ ಮಂಗಳೂರು ವಿಭಾಗದಲ್ಲಿ 2 ಡಿವೈಎಸ್ಪಿ ಹಾಗೂ 1 ಇನ್ಸ್ಪೆಕ್ಟರ್ ಹುದ್ದೆ ಇದ್ದರೆ 1 ಇನ್ಸ್ಪೆಕ್ಟರ್ ಹಾಗೂ 6 ಪಿಸಿಗಳ ಹುದ್ದೆಗಳು ಖಾಲಿ ಉಳಿದಿದೆ. ಉಡುಪಿಯಲ್ಲಿ 1 ಡಿವೈಎಸ್ಪಿ ಹಾಗೂ 1 ಇನ್ಸ್ಪೆಕ್ಟರ್ ಹುದ್ದೆ ಇರುತ್ತದೆ. ಇದರಲ್ಲಿ 1 ಇನ್ಸ್ಪೆಕ್ಟರ್ ಹುದ್ದೆ ಖಾಲಿಯಿದೆ. ಈ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಅಧಿಕಾರ ನೀಡಿರುವ ಜೊತೆಗೆ ಪಿಸಿ ಕಾಯಿದೆಯ (ಭ್ರಷ್ಟಾಚಾರ ನಿರ್ಮೂಲನಾ ಕಾಯಿದೆ) ಹೊಣೆಗಾರಿಕೆ ಕೂಡ ಲೋಕಾಯುಕ್ತಕ್ಕೆ ದೊರಕಿದೆ. ಇನ್ನುಳಿದಂತೆ ಪೊಲೀಸ್ ಠಾಣೆಯ ರೀತಿಯಲ್ಲಿ ಲೋಕಾಯುಕ್ತ ಇನ್ನು ಮುಂದೆ ಕಾರ್ಯಾಚರಣೆ ನಡೆಸುತ್ತದೆ. ಭ್ರಷ್ಟಾಚಾರದ ವಿರುದ್ದ ದೂರು ನೀಡಿದರೆ ಅದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಎಸಿಬಿಗಿಂತ ಮೊದಲು ಲೋಕಾಯುಕ್ತ ಅಧಿಕಾರದಲ್ಲಿದ್ದಾಗ ಮಂಗಳೂರು ವಿಭಾಗದ 12 ಪ್ರಕರಣಗಳಿಗೆ ಶಿಕ್ಷೆ ವಿಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಲೋಕಾಯುಕ್ತದ ಉಡುಪಿ ಡಿವೈಎಸ್ಪಿ ಜಗದೀಶ್, ಮಂಗಳೂರು ಡಿವೈಎಸ್ಪಿ ಚಲುವರಾಜು, ಕಲಾವತಿ, ಉಡುಪಿ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ, ಮಂಗಳೂರು ಪೊಲೀಸ್ ನಿರೀಕ್ಷಕ ಎನ್. ಅಮಾನುಲ್ಲಾ ಉಪಸ್ಥಿತರಿದ್ದರು.