ಬಂಟ್ವಾಳ, ಸೆ 25 (DaijiworldNews/SM): ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಟೆನ್ತ್ ಮೈಲ್, ಕುಂಜತ್ಕಲ ಪರಿಸರದಲ್ಲಿ ಚಿರತೆಯೊಂದರ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ರವಿವಾರ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರ ರಾತ್ರಿ 11:30ರ ಸುಮಾರಿಗೆ ರಫೀಕ್ ಎಂಬವರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಫರಂಗಿಪೇಟೆ ಸಮೀಪದ ಟೆನ್ತ್ ಮೈಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಚಿರತೆ ಇರುವುದು ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಅವರು ಅಲ್ಲೇ ಸಮೀಪದ ಹೊಟೇಲ್ ಒಂದರಲ್ಲಿ ವಿಷಯ ತಿಳಿಸಿ ತೆರಳಿದ್ದು ಸ್ಥಳೀಯರು ರಾತ್ರಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ರವಿವಾರ ಬೆಳಗ್ಗೆ ಟೆನ್ತ್ ಮೈಲ್ ಪಕ್ಕದ ಕುಂಜತ್ಕಲ ಅಂಗನವಾಡಿಯ ಹಿಂಬದಿಯ ಗುಡ್ಡೆಯಲ್ಲಿ ಚಿರತೆ ಕಂಡು ಬಂದಿದೆ ಎಂಬ ಸುದ್ದಿ ಪರಿಸರದಲ್ಲಿ ಹರಿದಾಡಿದೆ. ಶನಿವಾರ ಬೆಳಗ್ಗೆ ಫರಂಗಿಪೇಟೆ ಸಮೀಪದ ವಳಚ್ಚಿಲ್ ಪದವಿನಲ್ಲಿ ಚಿರತೆ ಕಂಡು ಬಂದಿತ್ತು ಎಂದು ಹೇಳಲಾಗಿದೆ.
ವಿಷಯ ತಿಳಿದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯರಾದ ನಝೀರ್ ಟೆನ್ತ್ ಮೈಲ್, ರಝಕ್ ಅಮೆಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಸ್ಥಳೀಯರಾದ ಕಮರುದ್ದೀನ್ ಕರ್ಮಾರ್, ನಿಝಾಮ್, ಸಿರಾಜ್ ಎಂ.ಎಚ್. ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಅಂಗನವಾಡಿ ಹಿಂಬದಿಯ ಗುಡ್ಡೆಯಲ್ಲಿ ಹುಡುಕಾಟ ನಡೆಸಿ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಡಿ.ಆರ್.ಎಫ್. ಜೀತೇಶ್ ಅವರ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಭಾಸ್ಕರ್, ರೇಖ, ಜೈರಾಂ ಅವರು ಚಿರತೆ ಕಂಡುಬಂದಿದೆ ಎನ್ನಲಾದ ಪರಿಸರದಲ್ಲಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಭಾಸ್ಕರ್ ಅವರು, ಸ್ಥಳದಲ್ಲಿ ಪ್ರಾಣಿಯೊಂದರ ಹೆಜ್ಜೆ ಗುರುತುಗಳು ಕಂಡು ಬಂದಿದ್ದು ಅದು ಚಿರತೆಯದ್ದೇ ಎಂದು ಹೇಳಲಾಗದು. ಆದರೂ ಸೂಕ್ತ ಸ್ಥಳದಲ್ಲಿ ಬೋನ್ ಇಡಲಾಗುವುದು. ಚಿರತೆ ಕಂಡು ಬಂದಿದೆ ಎಂದು ಹೇಳಲಾದ ಪರಿಸರದ ಜನರು ಜಾಗ್ರತೆ ವಹಿಸುವಂತೆ ತಿಳಿಸಿದರು