ಮಂಗಳೂರು, ಸೆ 25 (DaijiworldNews/SM): ಎಂಸಿಸಿ ಬ್ಯಾಂಕ್ ನ ತನ್ನ 104 ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 25 ರಂದು ಮಂಗಳೂರಿನ ಕೊಡಿಯಾಲ್ಬೈಲ್, ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಿತು. ಎಂಸಿಸಿ ಬ್ಯಾಂಕ್ ಲಿಮಿಟೆಡ್, 2021-22ನೇ ಹಣಕಾಸು ವರ್ಷದಲ್ಲಿ ಎಲ್ಲಾ ಹಣಕಾಸು ಮಾನದಂಡಗಳ ಅಡಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. ಬ್ಯಾಂಕ್ ಅಭೂತಪೂರ್ವ ನಿವ್ವಳ ಲಾಭ ರೂ.8.27 ಕೋಟಿ ಗಳಿಸಿದ್ದು, ಬ್ಯಾಂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ 138% ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಭೆಗೆ ನಿರ್ದೇಶಕರು ಹಾಗೂ ಸದಸ್ಯರನ್ನು ಸ್ವಾಗತಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅನಿಲ್ ಲೋಬೋ, 'ಬ್ಯಾಂಕ್ ರೂ.8.27 ಕೋಟಿ ನಿವ್ವಳ ಲಾಭ ಗಳಿಸಿದೆ, ಒಟ್ಟು ರೂ.532.08 ಕೋಟಿ ಠೇವಣಿ ಹಿಂದಿನ ವರ್ಷಕ್ಕಿಂತ 16.47% ಹೆಚ್ಚಳವಾಗಿದೆ. ಒಟ್ಟು ಮುಂಗಡಗಳು ರೂ.328.56 ಕೋಟಿಗಳಾಗಿದ್ದು, ಹಿಂದಿನ ವರ್ಷಕ್ಕಿಂತ 7.16% ಹೆಚ್ಚಳವಾಗಿದ್ದು, ಈ ಸಾಧನೆ ಮಾಡಿದ ಎಲ್ಲಾ ಗ್ರಾಹಕರು, ಸದಸ್ಯರು, ಸಿಬ್ಬಂದಿ ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇನ್ನು ಕೆಲವರು ಬ್ಯಾಂಕಿನ ಪ್ರತಿಷ್ಠೆಯನ್ನು ಹಾಳುಮಾಡುವ ದುರುದ್ದೇಶದಿಂದ ಬ್ಯಾಂಕಿನ ವಿರುದ್ಧ ಅಪಪ್ರಚಾರ ಮಾಡಲು ಪ್ರಾರಂಭಿಸಿದಾಗ ಬ್ಯಾಂಕಿನ ಜೊತೆಗೆ ದೃಢವಾಗಿ ನಿಂತು ಬೆಂಬಲಿಸಿದ ಎಲ್ಲಾ ಸದಸ್ಯರು ಮತ್ತು ಗ್ರಾಹಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ನವೆಂಬರ್ 27 ರಂದು ಮಿಲಾಗ್ರಿಸ್ ಪಿಯು ಕಾಲೇಜು ಮೈದಾನದಲ್ಲಿ ನಡೆಯಲಿರುವ ಶತಮಾನೋತ್ತರ ದಶಮಾನೋತ್ಸವ ಆಚರಣೆಗೆ ಗ್ರಾಹರನ್ನು ಆಹ್ವಾನಿಸಿದ್ದು, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ 103ನೇ ಮಹಾಸಭೆಯ ನಡಾವಳಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ನಿರ್ದೇಶಕ ದಿವಂಗತ ಡಿಜೆ ಪತ್ರಾವೊ ಮತ್ತು ಹಿಂದಿನ ವರ್ಷದಲ್ಲಿ ನಿಧನರಾದ ಇತರ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಆಂಡ್ರ್ಯು ಡಿ ಸೋಜಾ, ಮಾರ್ಸೆಲ್ ಡಿ ಸೋಜಾ, ಜೆ.ಪಿ. ರೊಡ್ರಿಗಸ್, ಎಲ್ರೋಯ್ ಕಿರಣ್ ಕ್ರಾಸ್ತಾ, ರೋಶನ್ ಡಿಸೋಜಾ, ಅನಿಲ್ ಪತ್ರಾವೊ, ಹೆರಾಲ್ಡ್ ಮೋಂತೆರೋ, ಡೇವಿಡ್ ಡಿ ಸೋಜಾ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.