ಕಾರ್ಕಳ, ಸೆ 25 (DaijiworldNews/DB): ಭ್ರ್ರಷ್ಟಾಚಾರವನ್ನೇ ರಾಜಕೀಯವಾಗಿಸಿಕೊಂಡ ಬಿಜೆಪಿಯ ರಾಜಕೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಚಿವ ಸುನೀಲ್ ಕುಮಾರ್ ಕಣ್ಣಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಭ್ರಷ್ಟಾಚಾರಿಯಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ವ್ಯಕ್ತಿಯ ನೋಡುವ ದೃಷ್ಟಿ ಮತ್ತು ಅಡುವ ಮಾತುಗಳು ಅವನ ಸಂಸ್ಕೃತಿಯನ್ನು ಅವಲಂಬಿತವಾಗಿರುತ್ತವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ತನ್ನದೆ ಇಲಾಖೆಯ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರುಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ವಿಚಾರಣೆಗೊಳ ಪಡಿಸಲು ಮೀನಮೆಷ ಎಣಿಸಿ ಜಾರಿಕೊಳ್ಳುತ್ತಿರುವ ಸುನೀಲ್ ಕುಮಾರ್, ವಿದ್ಯುತ್ ಬಿಲ್ ದರ ಏರಿಕೆಗೆ ಕಲ್ಲಿದ್ದಲು ಕೊರತೆಯ ಕಾರಣವನ್ನು ಮುಂದಿಟ್ಟು ತನ್ನ ಇಲಾಖೆಯೊಳಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮರೆಮಾಚಲು ನೋಡುತಿದ್ದಾರೆ. ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇರುವ ಹೊರತಾಗಿಯೂ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಆಗುತ್ತಿರುವುದಕ್ಕೆ ಸಚಿವರ ಬೇಜವಾಬ್ದಾರಿತನವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಲೇವಡಿ ಮಾಡಿದ್ದಾರೆ.
ಇವರ ಸರ್ಕಾರದ 40 ಪರ್ಸೆಂಟ್ ಕಮಿಷನ್ ದಂಧೆ ಪ್ರಕರಣದಲ್ಲಿ ದೂರುದಾರ ರಾಜ್ಯ ಗುತ್ತಿಗೆದಾರ ಸಂಘದವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಾದರೆ ಯಾವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಒತ್ತಾಯಿಸಿದರೂ ಮೌನ ವಹಿಸಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿರುವ ಅವರು, ಪಿಎಸ್ಐ ನೇಮಕಾತಿಯ ಬಹುಕೋಟಿ ಲಂಚ ಪ್ರಕರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೇ ಮೊದಲಾದ ಇವರದ್ದೇ ಸರ್ಕಾರದ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಈವರೆಗೂ ಪಾರದರ್ಶಕ ತನಿಖೆಗೆ ಏಕೆ ಒಳಪಡಿಸಿಲ್ಲ ಎಂದೂ ಪ್ರಶ್ನೆ ಎಸೆದಿದ್ದಾರೆ.
ಜಿ ಕೆಟಗರಿ ಸೈಟ್ ಹಂಚಿಕೆ ಸಂಪೂರ್ಣ ನಿಷೇಧವಾಗಿದ್ದರೂ, ಬದಲಿ ನಿವೇಶನದ ಹೆಸರಲ್ಲಿ ತಮ್ಮವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸೈಟ್ ಹಂಚಿಕೆ ಮಾಡಿ ಸುಪ್ರಿಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡ ಈ ಸರ್ಕಾರದ ಯಾವುದೇ ಸಚಿವನಿಗೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯನ್ನೊಳಗೊಂಡ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವ ಶಕ್ತಿ ಇಲ್ಲ ಎಂದವು ತಿಳಿಸಿದ್ದಾರೆ.
ದೇಶದ ಹಿತದೃಷ್ಟಿಗಿಂತ ಅಧಿಕಾರವೇ ಮುಖ್ಯವೆಂದು ಬಗೆದಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿಯೊಂದಿಗೆ ಪಿಎಫ್ಐಗೆ ಸಲುಗೆ ಕೊಟ್ಟು ಎಸ್ಡಿಪಿಐಯನ್ನು ಸಾಕಿ ಬೆಳೆಸಿತ್ತು. ಇದಕ್ಕೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸವರೇ ಸಾಕ್ಷಿ ನುಡಿದಿದ್ದಾರೆ ಎಂದವರು ವಿವರಿಸಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತಾವಧಿಯಲ್ಲಿ ಸೆಮಿ ಸಂಘಟನೆಯೂ ಸೇರಿ ಸುಮಾರು 36ಕ್ಕೂ ಹೆಚ್ಚು ದೇಶದ ಒಳಗೆ ಮತ್ತು ದೇಶದ ಹೊರಗೆ ದೇಶದ ವಿರುದ್ಧ ಕಾರ್ಯನಿರ್ವಸುತ್ತಿದ್ದ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಲಾಗಿತ್ತು. ಆ ಧೈರ್ಯ ಮತ್ತು ಇಚ್ಛಾಶಕ್ತಿ ಈ ಸರ್ಕಾರಕ್ಕಿಲ್ಲ. ಬಹುಶ ಈ ಸತ್ಯವನ್ನು ಅರಗಿಸಲು ಸಚಿವ ಸುನೀಲ್ ಕುಮಾರ್ ಅವರಿಗೆ ಕಷ್ಟವಾದೀತು ಎಂದು ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ಟೀಕಿಸಿದ್ದಾರೆ.