ಬಂಟ್ವಾಳ, ಸೆ 25 (DaijiworldNews/HR): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಎಸ್ಡಿಪಿಐ ಜಿಲ್ಲಾ ಕಛೇರಿಗೆ ನಡೆಸಿದ ದಾಳಿಯನ್ನು ಹಾಗೂ ಪಾಪ್ಯುಲರ್ ಫ್ರಂಟ್ ನಾಯಕರ ಬಂಧನವನ್ನು ಖಂಡಿಸಿ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ.ಸಿ ರೋಡಿನ ಕೈಕಂಬದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
ಪ್ರತಿಭಟನೆಯ ನೇತೃತ್ವ ವಹಿಸಿದ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೂನಿಶ್ ಅಲಿ ಮಾತನಾಡಿ "ಗಾಂಧಿಯ ಹತ್ಯೆ, ಬಾಬರೀ ಮಸ್ಜಿದ್ ಧ್ವಂಸ ಮತ್ತು ಗುಜರಾತ್ ಭಾಗಲ್ ಪುರ ಹತ್ಯಾಕಾಂಡಗಳಂತಹ ಭಯೋತ್ಪಾದಕ ಕೃತ್ಯಗಳ ಇತಿಹಾಸಗಳಿರುವ ಆರೆಸ್ಸೆಸ್ ಮತ್ತು ಸಂಘಪರಿವಾರದ ಕುಲಗಳ ಮೇಲೆ ದಾಳಿ ಮಾಡಬೇಕಿದ್ದ ಎನ್ಐಎಗೆ ದಾಳಿ ಮಾಡುವ ದಾರಿ ತಪ್ಪಿದೆ. ನಿಮಗೆ ಪಿಎಫ್ಐ ಎಂಬ ಸಾಮಾಜಿಕ ಸಂಘಟನೆಯನ್ನು ಯನ್ನು ದಮನಿಸಲು ಅಸಾಧ್ಯ. ಯಾಕೆಂದರೆ ನೀವು ನೂರು ವರುಷ ಮಾಡಿದ ಕಾರ್ಯವನ್ನು ಪಿಎಫ್ಐ ಬರೀ ಇಪ್ಪತ್ತೈದು ವರುಷಗಳಲ್ಲಿ ಮಾಡಿ ಮುಗಿಸಿದೆ. ಇಡೀ ದೇಶದಾದ್ಯಂತ ಮೂಲೆ ಮೂಲೆಯಲ್ಲೂ ದೇಶ ರಕ್ಷಣೆಯ ಆಶಯ - ಸಿದ್ಧಾಂತಗಳನ್ನು ಜನರಿಗೆ ಪಿಎಫ್ಐ ಮನವರಿಕೆ ಮಾಡಿ ಕೊಟ್ಟಿದೆ. ಕನಿಷ್ಠ ಪಕ್ಷ ಆರೆಸ್ಸೆಸ್ಸನ್ನು ವಿರೋಧಿಸುವ ಚಿತ್ತವನ್ನು ಜನರಿಗೆ ಪಿಎಫ್ಐ ತಿಳಿಸಿಕೊಟ್ಟಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯಪ್ರಭಾಷಣಗೈದ ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಮಾತನಾಡಿ "ಎನ್ಐಎ ಮತ್ತು ಬಿಜೆಪಿ ಸರಕಾರವು ಸಾಮಾಜಿಕ ಸಂಘಟನೆಯಾದ ಪಿಎಫ್ಐಯ ನಾಯಕರನ್ನು ಬಂಧಿಸಿದಾಕ್ಷಣ ನಾಯಕರಾರೂ ಇಲ್ಲ ಎಂಬ ತಿರುಕನ ಕನಸು ಕಂಡಿರಬಹುದು. ಆದರೆ ಪಿಎಫ್ಐಯ ಪ್ರತಿಯೊಂದು ಸದಸ್ಯರೂ ಕೂಡ ನಾಯಕರೆಂಬ ನಿಜಾಂಶವನ್ನು ಬಿಜೆಪಿ ತಿಳಿದುಕೊಳ್ಳಬೇಕು. ಪಿಎಫ್ಐಯ ಆಳ ಮತ್ತು ಅಗಲ ದೇಶವಿಡೀ ವಿಸ್ತರಿಸಿವೆ. ಪಿಎಫ್ಐಯನ್ನು ಸೈದ್ಧಾಂತಿಕವಾಗಿ ಎದುರಿಸಲು ವಿಫಲಗೊಂಡ ಆರೆಸ್ಸೆಸ್ ಮತ್ತು ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ದಾಳಿಗಳನ್ನು ಮಾಡುವ ಮೂಲಕ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ವಿಫಲ ಪ್ರಯತ್ನವಾಗಿದೆ. ನಿಮಗೆ ಪಿಎಫ್ಐಯ ಭಯವಿದೆ ಎಂಬುವುದು ಈ ದಾಳಿಯ ಮೂಲಕ ಬಹಿರಂಗವಾಗಿ ಗೋಚರವಾಗುತ್ತಿದೆ. ಇದು ನಿಮ್ಮ ತಾತ್ಕಾಲಿಕ ಗೆಲುವು" ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.
ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು, ಎಸ್ಡಿಪಿಐ ದ.ಕ ಜಿಲ್ಲಾ ಸದಸ್ಯರುಗಳಾದ ಶಾಹುಲ್ ಎಸ್ ಎಚ್, ಯೂಸುಫ್ ಆಲಡ್ಕ, ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಹಾಗೂ ಪುರಸಭಾ ಸದಸ್ಯರಾದ ಇದ್ರೀಸ್ ಪಿ ಜೆ ಉಪಸ್ಥಿತರಿದ್ದರು.
ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದನೆಗೈದರು. ಘೋಷಣೆಗಳ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.