ಪುತ್ತೂರು, ಸೆ 24 (DaijiworldNews/HR): ಎಸ್ಡಿಪಿಐ, ಪಿಎಫ್ಐ ಕಛೇರಿಗೆ ಎನ್ಐಎ ದಾಳಿ ಖಂಡಿಸಿ ಪುತ್ತೂರಿನ ದರ್ಬೆ ವೃತ್ತದ ಬಳಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ನವಾಝ್ ಬೆಳ್ತಂಗಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಸಿದ್ಧಾಂತಕ್ಕೆ ವಿರುದ್ಧ ನಿಂತವರ ಮೇಲೆ ಎನ್ಐಎ ದಾಳಿ ಮಾಡುತ್ತಿದೆ. ಬ್ರಿಟಿಷರು ಯಾವ ರೀತಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಮಾಡುತ್ತಿದ್ದರೋ, ಬಿಜೆಪಿ ಸರಕಾರ ಪಿಎಫ್ಐ ಮೇಲೆ ಮಾಡುತ್ತಿದೆ. ಯಾವ ರೀತಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿದರೋ ಅದೇ ರೀತಿ ಪಿಎಫ್ಐ ಹೋರಾಡಲಿದೆ, ಸ್ವಾತಂತ್ರ್ಯ ಪಡೆಯಲಿದೆ ಎಂದರು.
ಕೇಂದ್ರ ಸರಕಾರ ಇಡಿ ಮತ್ತು ಎನ್ಐಎ ಸಂಸ್ಥೆಯನ್ನು ಟೂಲ್ ಕಿಟ್ ಆಗಿ ಪಿಎಫ್ಐ ವಿರುದ್ಧ ಬಳಸುತ್ತಿದೆ. ಎನ್ಐಎ ಎಷ್ಟೇ ದಾಳಿ ಮಾಡಿದರೂ ಆರ್ಎಸ್ಎಸ್ ಸಿದ್ಧಾಂತ ಮತ್ತು ಮನುಸ್ಮೃತಿ ಜಾರಿ ಮಾಡಲು ಬಿಡುವುದಿಲ್ಲ. ದೇಶವನ್ನು ಮುಸ್ಲಿಂ ಅಥವಾ ಹಿಂದೂ ರಾಷ್ಟ್ರವನ್ನಾಗಿ ಮಾಡಲೂ ಬಿಡುವುದಿಲ್ಲ. ದೇಶ ಜಾತ್ಯಾತೀತ ದೇಶವಾಗಿಯೇ ಮುಂದುವರಿಯುವ ತನಕ ಎಸ್ಡಿಪಿಐ ಹೋರಾಟ ಮಾಡಲಿದೆ ಎಂದಿದ್ದಾರೆ.
ಇನ್ನು ದಾಳಿ ಹೆಸರಿನಲ್ಲಿ ಎಸ್ಡಿಪಿಐ ಪಕ್ಷದ ಕಛೇರಿಯಲ್ಲಿ ಕಳ್ಳತನ ನಡೆಸಲಾಗಿದ್ದು, ಎನ್ಐಎ ಬರಲಿ ಆದರೆ ಅವರ ಜೊತೆಗೆ ಕಳ್ಳರನ್ನು ಕಳುಹಿಸಬೇಡಿ. ತಕ್ಷಣವೇ ಸಮುದಾಯದ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.