ಮಂಗಳೂರು, ಸೆ 24 (DaijiworldNews/HR): ಮಂಗಳೂರು ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ದಸರಾ ಹಬ್ಬಕ್ಕೆ ಪೂರಕವಾಗಿ ಸೆ.28ರಿಂದ ಅಕ್ಟೋಬರ್ 1ರವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಹಿಂದೆ ನೀಡಲಾಗಿದ್ದ ಹೆಚ್ಚುವರಿ ನಾಲ್ಕು ದಿನಗಳ ರಜೆಯನ್ನು ದ.ಕ.ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಶನಿವಾರ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಅಕ್ಟೋಬರ್ 3ರಿಂದ ಅಕ್ಟೋಬರ್ 16ರವರೆಗೆ ರಜೆಯನ್ನು ನಿಗದಿಪಡಿಸಲಾಗಿದ್ದು, ಈ ಮಧ್ಯೆ ಸೆ.26ರಿಂದ ಆರಂಭಗೊಳ್ಳುವ ಮಂಗಳೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಸೆ.26ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ರಜೆಯನ್ನು ಘೋಷಿಸಿದ್ದು, ಅದನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ವಿಸ್ತರಿಸಲಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ನೀಡಲಾದ ಈ ನಾಲ್ಕು ಹೆಚ್ಚುವರಿ ರಜೆಗಳನ್ನು ನವೆಂಬರ್ ತಿಂಗಳಿನ ನಾಲ್ಕು ಶನಿವಾರ ಪೂರ್ಣ ದಿನದ ತರಗತಿ ಮತ್ತು ಎರಡು ರವಿವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ರಜೆಯನ್ನು ಸರಿದೂಗಿಸುವಂತೆ ತಿಳಿಸಿದ್ದಾರೆ.