ಕುಂದಾಪುರ, ಸೆ 24 (DaijiworldNews/HR): ಹುಲಿವೇಷಕ್ಕೆ ತನ್ನದೇಯಾದ ವಿಶೇಷತೆ, ಪರಂಪರೆ ಇದೆ. ನವರಾತ್ರಿಯ ಹುಲಿವೇಷ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಬಹುತ್ವ ಪರಂಪರೆಯನ್ನು ಇದರಲ್ಲಿ ಗಮನಿಸಬಹುದಾಗಿದೆ. ದುರಾದೃಷ್ಟವೆಂದರೆ ಇತ್ತೀಚೆಗಿನ ವರ್ಷಗಳಲ್ಲಿ ಪ್ರೋತ್ಸಾಹದ ಕೊರತೆ, ಹುಲಿವೇಷಧಾರಿಗಳ ಆಸಕ್ತಿಯ ಕೊರತೆಯಿಂದ ಕುಂದಾಪುರದ ಹುಲಿವೇಷ ಅಳಿವಿನಂಚಿನಲ್ಲಿದೆ. ಕುಂದಾಪುರದ ಹುಲಿವೇಷ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು, ಕಲಾಸಕ್ತರು ಆಲೋಚನೆ ಮಾಡಬೇಕಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಹೇಳಿದರು.
ಕುಂದಾಪುರದ ಕಲಾಕ್ಷೇತ್ರದ ಕಛೇರಿಯಲ್ಲಿ ನಡೆದ ಹುಲಿವೇಷ ಉಳಿವು, ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದ ಅವರು, ಕುಂದಾಪುರ ಹುಲಿಯ ವೇಷಭೂಷಣ, ನೃತ್ಯ, ಸಂಪ್ರದಾಯಗಳು, ಕುಂದಾಪುರ ಹೊರತುಪಡಿಸಿ ಇನ್ನೆಲ್ಲು ನೋಡಲು ಸಾಧ್ಯವಿಲ್ಲ. ಇಂಥಹ ಸಾಂಸ್ಕೃತಿಕ ವಾಗಿ ಗಟ್ಟಿಯಾಗಿರುವ ಹುಲಿವೇಷವನ್ನು ಕಾಪಾಡಿಕೊಳ್ಳಬೇಕಾದ ಜವಬ್ದಾರಿ ನಮಗಿದೆ ಎಂದರು.
ಕುಂದಾಪುರ ಕಲಾಕ್ಷೇತ್ರ ಕುಂದಾಪುರದ ಕಲಾಪ್ರಕಾರಗಳ ರಕ್ಷಣೆಗೆ ತನ್ನಿಂದಾದ ಕರ್ತವ್ಯ ನಿರ್ವಹಿಸುತ್ತಾ ಬಂದಿದೆ. ಕುಂದಾಪುರದ ಹುಲಿವೇಷಕ್ಕೊಂದು ವೇದಿಕೆ ಒದಗಿಸಿಕೊಡುವ ಕೆಲಸ ಕಲಾಕ್ಷೇತ್ರ ಈ ಹಿಂದೆಯೇ ಮಾಡಿದೆ ಎಂದಿದ್ದಾರೆ.
ಪತ್ರಕರ್ತ ಜಾನ್ ಡಿಸೋಜ ಮಾತನಾಡಿ, ಕುಂದಾಪುರದ ಹುಲಿವೇಷ ಪಕ್ಕಾ ಶಾಸ್ತ್ರೀಯವಾದುದು. ಆದರೆ ಸೂಕ್ತ ಪ್ರೋತ್ಸಾಹ ದೊರಕದೆ ಅಳಿವಿನಂಚಿನಲ್ಲಿದೆ. ಉಡುಪಿ, ಮಂಗಳೂರುಗಳಲ್ಲಿ ಹುಲಿವೇಷಕ್ಕೆ ಬಹಳ ಉತ್ತೇಜನ ಸಿಗುತ್ತಿದೆ. ಕಲೆ, ಸಂಸ್ಕೃತಿ, ಸಾಂಸ್ಕೃತಿಕ ನಾಶವಾಗಬಾರದು. ಸಾಂಸ್ಕೃತಿಕ ಪ್ರಜ್ಞೆ, ಪ್ರೀತಿಯಿಂದ ಇಂತಹ ಕಲಾ ಪ್ರಕಾರಗಳನ್ನು ಅಮೂಲಾಗ್ರವಾಗಿ ಮೇಲೆತ್ತುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಹುಲಿವೇಷ ಜಾತಿ, ಧರ್ಮಗಳ ಇತಿಮಿತಿಯಲ್ಲಿಲ್ಲ. ಎಲ್ಲರೂ ಇಷ್ಟಪಡುತ್ತಾರೆ. ವಿಶೇಷವಾದ ಆಕರ್ಷಣೆ ಇದರಲ್ಲಿದೆ. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿಯೂ ಹುಲಿವೇಷ ಕುಣಿತಕ್ಕೆ ಅವಕಾಶ ಕಲ್ಪಿಸಿದರೆ ಕಲೆಗೆ ಪ್ರೋತ್ಸಾಹ ಸಿಗುತ್ತದೆ. ಆ ಕೆಲಸ ಕುಂದಾಪುರದಲ್ಲಿ ಆಗಬೇಕು. ಕುಂದಾಪುರದ ಶಾಸ್ತ್ರೀಯವಾದ ಹುಲಿವೇಷ ಮತ್ತೆ ವಿಜೃಂಭಿಸಬೇಕು ಎಂದಿದ್ದಾರೆ.
ಕಲಾಕ್ಷೇತ್ರದ ಪೋಷಕರಾದ ಸತೀಶ ಕಾವೇರಿ, ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಸಭೆಯಲ್ಲಿ ಕಲಾಸಕ್ತರು, ಹುಲಿವೇಷಧಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು. ರಾಜೇಶ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.