ಮಂಗಳೂರು, ಫೆ 11(MSP): ತಾನು ವಾಸವಿದ್ದ ವಸತಿಸಮುಚ್ಚಯದಲ್ಲಿ ಇನ್ನೊಂದು ಫ್ಲ್ಯಾಟ್ ನವರ ಮೇಲಿನ ಸಿಟ್ಟಿನಿಂದ ತನ್ನ ಫ್ಲಾಟ್ ಗೆ ಬೆಂಕಿ ಹಚ್ಚಿದಕೊಂಡ ಘಟನೆ ನಗರದ ಕೆಪಿಟಿ ಬಳಿಯ ಬಾರೆಬೈಲ್ ವ್ಯಾಸ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಭಾನುವಾರ ರಾತ್ರಿ ನಡೆದಿದೆ.
ವಸತಿಸಮುಚ್ಚಯದ 5ನೇ ಅಂತಸ್ತಿನಲ್ಲಿ ವಾಸವಾಗಿದ್ದ ಮಹೇಶ್ ಎಂಬಾತ ತನ್ನ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ. ಈ ಘಟನೆ ರಾತ್ರಿ ಸುಮಾರು 8.30ರಿಂದ 9 ಗಂಟೆ ಮಧ್ಯೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಹೇಶ್ ಹಾಗೂ ಇದೇ ವಸತಿಸಮುಚ್ಚಯದ ಇನ್ನೊಂದು ಫ್ಲ್ಯಾಟ್ ನಲ್ಲಿ ವಾಸವಾಗಿದ್ದವರ ಜತೆ ವಾಹನ ನಿಲುಗಡೆಯ ಸ್ಥಳದ ವಿಚಾರವಾಗಿ ಅಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಭಾನುವಾರ ರಾತ್ರಿ ಜಗಳ ತಾರಕಕ್ಕೇರಿ ಆಕ್ರೋಶಗೊಂಡು ತನ್ನ ಮನೆಗೆ ತಾನೇ ಬೆಂಕಿ ಹಚ್ಚಿದ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯಲ್ಲಿ ಮಹೇಶ್, ಪತ್ನಿ, ಮಗ ಇದ್ದರು. ಘಟನೆ ಇತರ ಫ್ಲ್ಯಾಟ್ನವರ ಗಮನಕ್ಕೆ ಬಂದ ಕೂಡಲೇ ಅಗ್ನಿ ಶಾಮಕ ದಳದ ಸಿಬಂದಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು.ಆದರೆ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎಂದು ಪ್ರಕರಣ ದಾಖಲಾಗಿದೆ. ಮನೆಯೊಳಗಿನ ಕೆಲವು ವಸ್ತುಗಳು ಸುಟ್ಟುಹೋಗಿವೆ.