ಉಡುಪಿ, ಫೆ 10(SM): ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೆಬ್ರಿಯ ಮುನಿಯಾಲು ಸಮೀಪದ ಚಟ್ಕಲ್ ಪಾದೆಯ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಮಾಂತಿಬೆಟ್ಟು ನಿವಾಸಿ ಸಂತೋಷ್ ಎಂಬವರ ಪತ್ನಿ ದೀಪಾ(35) ಹಾಗೂ ಮಕ್ಕಳಾದ ಪ್ರಿಯಾ(6) ಮತ್ತು ಶ್ರೇಯಾ(9) ಎಂದು ಗುರುತಿಸಲಾಗಿದೆ. ಮೂಲತಃ ಶಿವಮೊಗ್ಗದ ಮಂಜುನಾಥ್ ಎಂಬವರು ಕಳೆದ ಹಲವು ವರ್ಷಗಳಿಂದ ಮಾತಿಬೆಟ್ಟುವಿನಲ್ಲಿ ಕೋಳಿ ಫಾರಂ ಉದ್ಯಮ ನಡೆಸುತ್ತಿದ್ದು, ಇವರೊಂದಿಗೆ ಇವರ ಮಗ ಸಂತೋಷ್ ಕೂಡ ಕುಟುಂಬದೊಂದಿಗೆ ಇಲ್ಲೇ ವಾಸವಾದ್ದರು.
ಹಲವು ಸಮಯದಿಂದ ಗರ್ಭಕೋಶದ ತೊಂದರೆಯಿಂದಾಗಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ದೀಪಾ ಮಾನಸಿಕವಾಗಿ ನೊಂದಿದ್ದರು. ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಅವರು, ನಾನು ಬದುಕುವುದಿಲ್ಲ, ನಾನಿಲ್ಲದೆ ನನ್ನ ಮಕ್ಕಳಿಗೆ ಬದುಕಲು ಕಷ್ಟವಾಗಬಹುದೆಂದು ತಿಳಿದು ಮಕ್ಕಳಾದ ಪ್ರಿಯಾ ಹಾಗೂ ಶ್ರೇಯಾ ಎಂಬವರನ್ನು ಕೊಲ್ಲುವ ಉದ್ದೇಶದಿಂದ ಮನೆಯಲ್ಲಿ ಫೆ. 9ರಂದು ರಾತ್ರಿ ವೇಳೆ ಊಟದಲ್ಲಿ ವಿಷ ಪಾಷಣವನ್ನು ಬೆರೆಸಿ ಮಕ್ಕಳಿಗೆ ನೀಡಿದ್ದರು.
ಬಳಿಕ ದೀಪಾ ಕೂಡ ವಿಷ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಮೂವರನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಇದರಲ್ಲಿ ದೀಪಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 10 ಗಂಟೆಗೆ ಮೃತಪಟ್ಟರು. ಬೆಳಗ್ಗೆ 11.15ರ ಸುಮಾರಿಗೆ ಚಿಕಿತ್ಸೆಯಲ್ಲಿದ್ದ ಪ್ರಿಯಾ ಹಾಗೂ ಅದರ ನಂತರ ಶ್ರೇಯ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಿಬ್ಬರು ಹೆಬ್ರಿಯ ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು, ಶ್ರೇಯಾ ಮೂರನೆ ತರಗತಿ ಹಾಗೂ ಪ್ರಿಯಾ ಎಲ್ಕೆಜಿಯಲ್ಲಿ ಕಲಿಯುತ್ತಿದ್ದರು. ಈ ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಮನೆಯವರು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.