ಮಂಗಳೂರು, ಸೆ 24 (DaijiworldNews/MS): ಅಪ್ರಾಪ್ತೆ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ)ಎಫ್ಟಿಎಸ್ಸಿ -1 ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕೊಕ್ಕಡದ ಪದ್ಮನಾಭ ಎಂಬಾತ ಶಿಕ್ಷೆಗೊಳಗಾದವ.
೨೦೧೯ರ ಆಗಸ್ಟ್ ೧೭ರಂದು ಮಧ್ಯಾಹ್ನ ತರಗತಿ ಮುಗಿಸಿ ಮನೆಯ ಕಡೆಗೆ ತೆರಳುತ್ತಿದ್ದಾಗ ಬಾಲಕಿಯನ್ನು ಅಡ್ಡಗಟ್ಟಿದ್ದ ಆರೋಪಿ ಪದ್ಮನಾಭ ಎಂಬಾತ ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದಿದ್ದ. ಈ ವೇಳೆ ನೊಂದ ಬಾಲಕಿ ಹೆದರಿ ಆರೋಪಿತನ ಹಿಡಿತದಿಂದ ಕೊಸರಿ ಬಿಡಿಸಿಕೊಂಡು ತನ್ನ ಗೆಳತಿಯ ಮನೆಯ ಕಡೆಗೆ ಓಡಿ ಆಕೆಯಲ್ಲಿ ಹಾಗೂ ಆಕೆಯ ತಂದೆಯಲ್ಲಿ ವಿಚಾರ ತಿಳಿಸಿದ್ದಳು.
ಈ ವೇಳೆ ಆರೋಪಿ ಪದ್ಮನಾಭ ನೊಂದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಬಾಲಕಿಯ ಗೆಳತಿಯ ತಂದೆಗೂ ಅವಾಚ್ಯ ಶಬ್ದಗಳಿಂದ ಬೈದಿದ್ದ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಪೂರ್ಣಗೊಳಿಸಿದ ಧರ್ಮಸ್ಥಳ ಪೊಲೀಸ್ ಠಾಣಾ ಎಸ್.ಐ. ಚಂದ್ರಶೇಖರ್ ಅವರು ಆರೋಪಿ ಪದ್ಮನಾಭನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿರವರು ಆರೋಪಿ ಪದ್ಮನಾಭನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಪೋಕ್ಸೋ ಕಾಯ್ದೆ ಕಲಂ 12ರಡಿ ಅಪರಾಧಕ್ಕೆ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ, ಐಪಿಸಿ ೩೫೪(ಡಿ)ರಡಿಯ ಅಪರಾಧಕ್ಕಾಗಿ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ ಮತ್ತು ಐಪಿಸಿ 341ರಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.