ಆತ್ರಾಡಿ, ಸೆ 23 (DaijiworldNews/SM): ಇತ್ತೀಚೆಗೆ ಆತ್ರಾಡಿ ಗ್ರಾಮ ಪಂಚಾಯತು ವತಿಯಿಂದ ರಸ್ತೆ ಕಾಂಕ್ರೀಟಿಕರಣ ಕೆಲಸ ನಡೆಯುತ್ತಿದ್ದ ಸಮಯ ಸ್ಥಳೀಯ ನಿವಾಸಿಗಳು ಹಾಗೂ ಪಂಚಾಯತು ಉಪಾಧ್ಯಕ್ಷರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಹೊಕೈಯ ವೀಡಿಯೋ ಅಂತರ್ಜಾಲದಲ್ಲಿ ಬಾರೀ ವೈರಲ್ ಆಗಿತ್ತು. ಹಿರಿಯಡ್ಕ ಆರಕ್ಷಕ ಠಾಣೆಯಲ್ಲಿ ಪಂಚಾಯತಿನ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಪರೀಕ ಹಾಗೂ ಇತರ ಈರ್ವರ ಮೇಲೆ ಎಫ್.ಐ.ಆರ್. ಕೂಡಾ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರತ್ನಾಕರ ಶೆಟ್ಟಿಯವರಿಗೆ ನಿರೀಕ್ಷಣಾ ಜಾಮೀನು ನೀಡಿ ಉಡುಪಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಸೆ. 22ರಂದು ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 5ರಂದು ಆತ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವ ಸಮಯದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ್ಯ ರತ್ನಾಕರ ಶೆಟ್ಟಿ, ಸ್ಥಳೀಯ ನಿವಾಸಿಗಳಾದ ಚಂದ್ರಹಾಸ ಶೆಟ್ಟಿ ಮತ್ತು ಸಂತೋಷ ಪೂಜಾರಿಯವರು ಸ್ಥಳೀಯ ನಿವಾಸಿ ಆರತಿ ಸುರೇಶ್ ಶೆಟ್ಟಿಯವರ ಹಲ್ಲೆ ನಡೆಸಿರುವ ಬಗ್ಗೆ ಹಿರಿಯಡ್ಕ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಭಾರತೀಯ ದಂಡ ಸಂಹಿತೆ ಕಲಂ 447, 504, 341, 324, 325, 354 ಹಾಗೂ 34ರಂತೆ ಎಫ್.ಐ.ಆರ್ ಕೂಡಾ ದಾಖಲಾಗಿತ್ತು. ಸದ್ರಿ ರಸ್ತೆ ಕಾಮಗಾರಿಯ ಸಮಯದಲ್ಲಿ ನಡೆದ ಘಟನೆಯ ವೀಡೀಯೋ ವಾಟ್ಸಾಫ್ ನಲ್ಲಿ ತುಂಬಾ ವೈರಲ್ ಆಗಿದ್ದು, ರಾಜ್ಯದ ಜನರ ಗಮನ ಸೆಳೆದಿತ್ತು. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತು ಉಪಾಧ್ಯಕ್ಷ್ಯ ಪರೀಕ ರತ್ನಾಕರ ಶೆಟ್ಟಿಯವರು ಟಿ.ವಿ. ವಾಹಿನಿಯೊಂದಕ್ಕೆ ಸಮಜಾಯಿಷಿ ನೀಡಿರುವ ವೀಡಿಯೋ ಸಹ ವೈರಲ್ ಆಗಿತ್ತು. ಇದೀಗ ರತ್ನಾಕರ ಶೆಟ್ಟಿಯವರಿಗೆ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿರುತ್ತದೆ. ರತ್ನಾಕರ ಶೆಟ್ಟಿಯವರ ಪರವಾಗಿ ಉಡುಪಿ ಖ್ಯಾತ ನ್ಯಾಯವಾದಿ ಹಾಗೂ ನೋಟರಿ ಅತ್ರಾಡಿ ಪೃಥ್ವಿರಾಜ ಹೆಗ್ಡೆ ವಾದಿಸಿದ್ದರು.