ಮಂಗಳೂರು, ಸೆ 23 (DaijiworldNews/SM): ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ದಸರಾ ಸೆಪ್ಟೆಂಬರ್ 28ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ನೀಡಲಾಗಿದೆ. ಆದರೆ ಮಂಗಳೂರು ದಸರಾ ಆರಂಭಗೊಳ್ಳುವ ಸಂದರ್ಭದಲ್ಲೇ ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಆಗ್ರಹಗಳು ಕೇಳಿಬಂದಿತ್ತು.
ಇದೀಗ ತಾಲೂಕಿನಲ್ಲಿ ಹೆಚ್ಚುವರಿ ನಾಲ್ಕು ದಿನ ರಜೆ ಘೋಷಿಸಲು ಶಿಕ್ಷಣ ಸಚಿವರು ಸೂಚಿಸಿದ ಹಿನ್ನೆಲೆ ಮಂಗಳೂರು ತಾಲೂಕಿನಲ್ಲಿ ಮಾತ್ರ ಸೆ. 28 ರಿಂದ ಅಕ್ಟೋಬರ್ 1ರ ತನಕ ಹೆಚ್ಚುವರಿ ರಜೆ ನೀಡಲಾಗಿದ್ದು, ಆ ಮೂಲಕ ಅಕ್ಟೋಬರ್ 16ರವರೆಗೆ ದಸರಾ ರಜೆ ನೀಡಿದಂತಾಗಿದೆ.
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಹಾಗೂ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ (2022) ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.