ಕುಂದಾಪುರ, ಸೆ 23 (DaijiworldNews/HR): ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆಯ ಕನಸು ಕೊನೆಗೂ ನನಸಾಗಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಇಷ್ಟರ ತನಕ ಹಟ್ಟಿಕುದ್ರು ಜನ ಬಸ್ರೂರಿಗೆ ಬರಲು, ಬಸ್ರೂರು ಜನತೆ ಹಟ್ಟಿಕುದ್ರು, ಹಟ್ಟಿಯಂಗಡಿಗಳಿಗೆ ಹೋಗಲು ದೋಣಿಯನ್ನೇ ಅನುಸರಿಸಬೇಕಾಗಿತ್ತು. ಅಥವಾ ಕುಂದಾಪುರಕ್ಕೆ ಹೋಗಿಯೋ, ಮಾವಿನಕಟ್ಟೆಗೆ ಹೋಗಿಯೂ ಸುತ್ತುಬಳಸಿ ಬರಬೇಕಾಗಿತ್ತು. ಸೇತುವೆ ನಿರ್ಮಾಣದಿಂದ ಕೂಗಳತೆಯಲ್ಲಿ ತಲುಪಬಹುದಾಗಿದೆ. ಎರಡು ಗ್ರಾಮಗಳ ಸಂಪರ್ಕ ಕೊಂಡಿ ಬೆಸೆದುಕೊಂಡಿದೆ.
ವಾರಾಹಿ ನೀರಾವರಿ ನಿಗಮದಿಂದ 14.59 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಬಸ್ರೂರು ಮಂಡಿಬಾಗಿಲಿನಿಂದ ಹಟ್ಟಿಕುದ್ರು ಮಹಾಗಣಪತಿ ದೇವಸ್ಥಾನದ ಹತ್ತಿರ ಈ ಸೇತುವೆ ನಿರ್ಮಾಣವಾಗಿದೆ. 320 ಮೀಟರ್ ಉದ್ದವಿರುವ ಸೇತುವೆ 18 ಪಿಲ್ಲರ್ಗಳನ್ನು ಒಳಗೊಂಡಿದೆ. ಘನವಾಹನ ಸಂಚಾರಿಸುವಷ್ಟು ಅಗಲ ಹಾಗೂ ಎರಡು ತುದಿಗಳಲ್ಲಿ ಎರಡು ಅಪಾರ್ಟ್ಮೆಂಟ್ಗಳನ್ನು ಅಳವಡಿಸಲಾಗಿದೆ. ಪಾದಚಾರಿಗಳಿಗೆ ಸಂಚರಿಸಲು ಅನುಕೂಲಕರವಾದ ಪಥವೂ ಇದೆ.
ಇನ್ನು ಅಂದಿನ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಅನುದಾನ ಮಂಜೂರಾಗಿತ್ತು. ಎರಡು ವರ್ಷಗಳ ಹಿಂದೆ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸೆಂಟ್ ಅಂತೋನಿ ಕನ್ಸ್ಟ್ರಕ್ಷನ್ ಕಂಪೆನಿ ಕಾಮಗಾರಿ ನಡೆಸಿತ್ತು.
ಸೇತುವೆ ನಿರ್ಮಾಣದಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಹಟ್ಟಿಕುದ್ರು, ಹಟ್ಟಿಯಂಗಡಿ, ಕರ್ಕಿ ಮೊದಲಾದ ಭಾಗಗಳ ವಿದ್ಯಾರ್ಥಿಗಳು ಬಸ್ರೂರುವಿನಲ್ಲಿರುವ ಶಾಲಾ ಕಾಲೇಜುಗಳಿಗೆ ಬರಲು ಅನುಕೂಲವಾಗುತ್ತದೆ.