ಉಡುಪಿ, ಸೆ 23 (DaijiworldNews/DB): ಅಜೆಕಾರು ಗಾಣದಬೆಟ್ಟು ಪ್ರದೇಶದ ಅಮ್ಮು ಶೆಟ್ಟಿ ಎಂಬವರ ಜಾಗದಲ್ಲಿ 14ನೇ ಶತಮಾನಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ. ಸಂಶೋಧಕರ ತಂಡವೊಂದು ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ (ಅಂಗಸಂಸ್ಥೆ ಎನ್ಟಿಸಿ-ಎಓಎಂ) ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಮತ್ತು ಕಡಿಯಾಳಿ ಯು. ಕಮಲಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಹೈದರಾಬಾದ್ ಪ್ಲೀಚ್ ಇಂಡಿಯಾ ಫೌಂಡೇಶನ್ನ ಸಹಾಯಕ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನವನ್ನು ಓದಿರುತ್ತಾರೆ.
ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿರುವ ಈ ದಾನ ಶಾಸನವು 3 ಅಡಿ ಎತ್ತರ ಹಾಗೂ 2 ಅಡಿ ಅಗಲವಿದ್ದು, ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ ಕೆತ್ತನೆಯನ್ನು ಮಾಡಲಾಗಿದ್ದು, ಶಕವರುಷ 1331ನೇ ಮಾರ್ಗಶಿರ ಶುದ್ಧ 1 ಗುರುವಾರ ಅಂದರೆ ಸಾಮಾನ್ಯ ವರ್ಷ 1409 ವಿರೋಧಿ ಸಂವತ್ಸರ ನವಂಬರ್ 07 ಗುರುವಾರಕ್ಕೆ ಸರಿ ಹೊಂದುತ್ತದೆ.
ಮಂಣೆ (ಪ್ರಸ್ತುತ ಮರ್ಣೆ)ಯ ವಿಷ್ಣು ದೇವರ ದೀವಿಗೆಗೆ ಆಜಕಾರ (ಪ್ರಸ್ತುತ ಅಜೆಕಾರು) ಕಾತು ಮೂಲಿಗೆ ಎಂಬ ವ್ಯಕ್ತಿಯು ಬೆಟ್ಟಿಂ (ಪ್ರಸ್ತುತ ಗಾಣದಬೆಟ್ಟು) ಪ್ರದೇಶದಿಂದ ಎಣ್ಣೆ ಮತ್ತು 11 ತೆಂಗಿನಕಾಯಿಯನ್ನು (ಅಥವಾ 11 ತೆಂಗಿನಕಾಯಿಯ ಎಣ್ಣೆ) ದಾನವಾಗಿ ಬಿಟ್ಟಿರುವುದರ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಮರ್ಣೆ, ಸುರೇಶ್ ಶೆಟ್ಟಿ ಗಾಣದಬೆಟ್ಟು ಮನೆ, ರವಿ ಸಂತೋಷ್ ಆಳ್ವ ಮತ್ತು ಸುಶಂತ್ ಶೆಟ್ಟಿ ಸಹಕಾರ ನೀಡಿದರು.
ಈ ಹಿಂದೆಯೂ ಶಾಸನ ಪತ್ತೆ
ಇನ್ನು ಉಡುಪಿಯಲ್ಲಿ ಶಾಸನ ಲಭಿಸಿರುವುದು ಇದೇ ಮೊದಲಲ್ಲ. ಕಳೆದ ಜೂನ್ ತಿಂಗಳಲ್ಲಿ ಬೈಂದೂರು ತಾಲೂಕಿನ ನಂದನವನ ಗ್ರಾಮದ ಸಂಜೀವ ಪ್ರಭು ಎಂಬವರ ಜಾಗದಲ್ಲಿ 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾಶಾಸನ ಪತ್ತೆಯಾಗಿತ್ತು. ಕಾನ ಶಿಲೆಯಲ್ಲಿ ಕೆತ್ತಲಾಗಿದ್ದ ಈ ಶಾಸನ 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿದದ್ದು, ಕನ್ನಡದಲ್ಲಿ 38 ಸಾಲುಗಳು ಉಲ್ಲೇಖಗೊಂಡಿತ್ತು.